ಶಿವಮೊಗ್ಗ: ಜೇನುಗಳು ಪ್ರಕೃತಿಯನ್ನು ವೃದ್ಧಿಸಲು ಸಹಕಾರಿಯಾಗಿದ್ದು, ಜೇನುತುಪ್ಪಕ್ಕೆ ಜಾಗತಿಕ ಮಾರುಕಟ್ಟೆ ಒದಗಿಸಲು ರಾಜ್ಯ ಸರ್ಕಾರವು 'ಝೇಂಕಾರ' ಎಂಬ ಬ್ರ್ಯಾಂಡ್ ನೀಡಲು ಮುಂದಾಗಿದೆ. ಜೇನುತುಪ್ಪ ಉತ್ಪಾದಕರು ಇಷ್ಟು ದಿನ ಯಾವುದೇ ಬ್ರ್ಯಾಂಡ್ ಇಲ್ಲದೇ, ಸ್ಥಳೀಯ ಮಾರುಕಟ್ಟೆಯಲ್ಲೆ ಮಾತ್ರ ಸ್ಪರ್ಧೆ ಮಾಡಬೇಕಿತ್ತು. ಆದರೆ, ರಾಜ್ಯ ಸರ್ಕಾರ ನೀಡುತ್ತಿರುವ 'ಝೇಂಕಾರ' ಬ್ರ್ಯಾಂಡ್ನಿಂದ ಸ್ಥಳೀಯ ಜೇನುತುಪ್ಪ ಉತ್ಪಾದಕರು ಸಹ ವಿಶ್ವ ಮಾರುಕಟ್ಟೆಯನ್ನು ಪ್ರವೇಶಿಸಬಹುದಾಗಿದೆ.
ಜೇನು ಉತ್ಪಾದಕರಿಗೆ ರಾಜ್ಯ ಸರ್ಕಾರವು 'ಝೇಂಕಾರ' ಬ್ರ್ಯಾಂಡ್ನ ಲೋಗೊವನ್ನು ನೀಡುತ್ತದೆ. ಉತ್ಪಾದಕ ತನ್ನ ಜೇನುತುಪ್ಪ ಬಾಟಲಿ ಸೇರಿದಂತೆ ವಿವಿಧ ಬಾಕ್ಸ್ಗಳ ಅಳತೆಗೆ ತಾನೇ ಲೇಬಲ್ ಮಾಡಿಕೊಂಡು ಅಂಟಿಸಿಕೊಂಡು ಮಾರಾಟ ಮಾಡಬಹುದಾಗಿದೆ.
ಅಧಿಕಾರಿಗಳಿಂದ ಮಾಹಿತಿ (ETV Bharat) 'ಝೇಂಕಾರ' ಲೋಗೊಗಾಗಿ ಉತ್ಪಾದಕರು ಏನು ಮಾಡಬೇಕು:ಜೇನುತುಪ್ಪ ಉತ್ಪಾದಕರು ಸರ್ಕಾರ ನೀಡುವ 'ಝೇಂಕಾರ' ಬ್ರ್ಯಾಂಡ್ ಅನ್ನು ಪಡೆಯಬೇಕಾದರೆ, ಆಯಾ ಜಿಲ್ಲೆಯ, ತಾಲೂಕಿನ ತೋಟಗಾರಿಕಾ ಇಲಾಖೆಯ ಕಚೇರಿಗೆ ಹೋಗಿ ಇಲಾಖೆಯೊಂದಿಗೆ ಎಂಒಯು ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಪ್ರತಿ ಉತ್ಪಾದಕ 2,500 ರೂ. ಕಟ್ಟಬೇಕಾಗುತ್ತದೆ. ನಂತರ ಆತನಿಗೆ ಝೇಂಕಾರ ಲೋಗೊವನ್ನು ನೀಡಲಾಗುತ್ತದೆ. ಜೇನುತುಪ್ಪಕ್ಕೆ ಜಾಗತಿಕಮಟ್ಟದಲ್ಲಿ ಬೇಡಿಕೆ ಇದೆ. ಈ ರೀತಿಯ ಬ್ರ್ಯಾಂಡ್ ಇದ್ರೆ ಅದಕ್ಕೆ ಇನ್ನಷ್ಟು ಬೇಡಿಕೆ ಹೆಚ್ಚಾಗುತ್ತದೆ. ಅಲ್ಲದೇ ಉತ್ತಮ ಬೆಲೆ ಸಹ ಲಭ್ಯವಾಗುತ್ತದೆ. ಆರ್ಯವೇದಿಕ್ ಔಷಧ ಸೇವನೆಗೆ ಉತ್ತಮ ಗುಣಮಟ್ಟದ ಜೇನುತುಪ್ಪ ಬೇಕಾಗುತ್ತದೆ. ಇದರಿಂದ ಗ್ರಾಹಕರು ಉತ್ತಮ ಗುಣಮಟ್ಟದ ಜೇನುತುಪ್ಪ ಖರೀದಿ ಮಾಡುತ್ತಾರೆ. ಸರ್ಕಾರದ ಈ ಸೇವೆಯನ್ನು ಜೇನು ಉತ್ಪಾದಕರು ಬಳಸಿಕೊಂಡು ಉತ್ತಮ ಲಾಭ ಪಡೆಯಬಹುದಾಗಿದೆ.
ಝೇಂಕಾರ ಬ್ರ್ಯಾಂಡ್ ಅನ್ನು ಹೇಗೆ ಬಳಸಿಕೊಳ್ಳಬೇಕು?:ಶಿವಮೊಗ್ಗ ಜಿಲ್ಲಾ ತೋಟಗಾರಿಕಾ ಇಲಾಖೆ ಸಹಾಯಕ ಅಧಿಕಾರಿ ಪೂಜಾ, ಝೇಂಕಾರ ಬ್ರ್ಯಾಂಡ್ ಅನ್ನು ಹೇಗೆ ಬಳಸಿಕೊಳ್ಳಬೇಕು, ಹೇಗೆ ಮಾರುಕಟ್ಟೆ ವಿಸ್ತರಿಸಿಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದ್ದು, "ಜೇನುತುಪ್ಪವನ್ನು ಜನಪ್ರಿಯಗೊಳಿಸಲು ಹಾಗೂ ಜೇನುತುಪ್ಪಕ್ಕೆ ಸೂಕ್ತ ಸ್ಥಳೀಯ ಹಾಗೂ ಜಾಗತಿಕ ಮಾರುಕಟ್ಟೆ ಒದಗಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ. ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ಪಡೆಯಲು ಹಾಗೂ ಜೇನು ಕೃಷಿಯ ಜಾಗತಿಕ ಮಟ್ಟ ಸುಧಾರಿಸಲು ಜೇಂಕಾರ ಎಂಬ ಬ್ರ್ಯಾಂಡ್ನ ಮೂಲಕ ಜೇನುತುಪ್ಪಕ್ಕೆ ಒಂದು ಮಾರುಕಟ್ಟೆ ಒದಗಿಸಲಾಗುತ್ತಿದೆ. ಈ ಬ್ರ್ಯಾಂಡ್ನಿಂದಾಗಿ ಜಿಲ್ಲೆಯಲ್ಲಿ 4,500 ಜೇನು ಉತ್ಪಾದಕರು ಇದ್ದು, ಇವರಿಂದ 14.44 ಮೇಟ್ರಿಕ್ ಟನ್ ಜೇನಿಗೆ ಉತ್ತಮ ಮಾರುಕಟ್ಟೆ ಲಭ್ಯವಾಗಲು ಸಹಾಯಕವಾಗುತ್ತದೆ. ಜೇನುತುಪ್ಪ ಗುಣಮಟ್ಟ ಪರೀಕ್ಷಿಸಲು ರಾಜ್ಯಮಟ್ಟದ ಸಮಿತಿ ರಚನೆ ಮಾಡಲಾಗುತ್ತದೆ" ಎಂದರು.
ಎಲ್ಲಾ ಜೇನು ತುಪ್ಪವನ್ನು ಒಂದೇ ಎಂದು ಹೇಗೆ ಹೇಳುತ್ತೀರಿ?:ಕಳೆದ 25 ವರ್ಷಗಳಿಂದ ಜೇನು ಕೃಷಿ ನಡೆಸಿಕೊಂಡು ಬರುತ್ತಿರುವ ಸಾಗರದ ನಾಗೇಂದ್ರ ಪ್ರಸಾದ್ ಈಟಿವಿ ಭಾರತ ಜೊತೆ ಮಾತನಾಡಿ, ಪ್ರತಿ ವರ್ಷ 8-10 ಕ್ವಿಂಟಾಲ್ ಜೇನುತುಪ್ಪ ಉತ್ಪಾದಿಸುತ್ತೇನೆ. ಇತ್ತಿಚೇಗೆ ಸರ್ಕಾರ ಝೇಂಕಾರ ಎಂಬ ಬ್ರ್ಯಾಂಡ್ ಮಾಡಿಕೊಟ್ಟಿದೆ. ಇದು ಜೇನು ಕೃಷಿಕರಿಗೆ ಒಂದು ದೃಷ್ಟಿಯಿಂದ ವರದಾನ, ಬ್ರ್ಯಾಂಡ್ ಮೌಲ್ಯ ಸಿಗಬಹುದಾಗಿದೆ. ಸರ್ಕಾರ ಜೇನುತುಪ್ಪಕ್ಕೆ ಮಾರುಕಟ್ಟೆ ಒದಗಿಸಲು ಉತ್ತಮ ವೇದಿಕೆಯನ್ನು ಒದಗಿಸಿದೆ, ಆದರೆ ಎಲ್ಲಾ ಜೇನು ತುಪ್ಪವನ್ನು ಒಂದೇ ಎಂದು ಹೇಗೆ ಹೇಳುತ್ತೀರಿ. ಒಂದೂಂದು ಪ್ರದೇಶದ ಜೇನುತುಪ್ಪ ಒಂದೂಂದು ರೀತಿ ಇರುತ್ತದೆ. ಮಲೆನಾಡಿನ, ಅದರಲ್ಲೂ ಪಶ್ಚಿಮಘಟ್ಟದ ಜೇನುತುಪ್ಪ ಬೇರೆ ಆಗಿರುತ್ತದೆ. ಅದೇ ಬಯಲು ಸೀಮೆಯ ಜೇನುತುಪ್ಪ ಬೇರೆ ಆಗಿರುತ್ತದೆ. ಸರ್ಕಾರ ಇದರ ಬಗ್ಗೆ ತನ್ನ ನಿಲುವನ್ನು ತಿಳಿಸಬೇಕಿದೆ. ಪಶ್ಚಿಮಘಟ್ಟದ ಜೇನುತುಪ್ಪ ವಿವಿಧ ಗಿಡಗಳಿಂದ ಆದ ಜೇನುತುಪ್ಪವಾಗಿರುತ್ತದೆ. ಇದು ಔಷಧೀಯ ಜೇನುತುಪ್ಪವಾಗಿರುತ್ತದೆ. ಕೆಲವು ಕಡೆ ರಬ್ಬರ್ ಗಿಡ ಹಾಗೂ ವಿವಿಧ ರೀತಿ ಹೂವುಗಳಿಂದ ಸಿಕ್ಕ ಜೇನುತುಪ್ಪವಾಗಿರುತ್ತದೆ. ಗ್ರಾಹಕರಿಗೆ ಇದರ ಬಗ್ಗೆ ಬಂದಿರುವ ಅನುಮಾನಗಳಿಗೆ ಸರ್ಕಾರ ಸರಿಯಾದ ಉತ್ತರ ನೀಡಬೇಕಾಗುತ್ತದೆ. ಜೇನುತುಪ್ಪ ಗುಣಮಟ್ಟಕ್ಕೆ ಪ್ರತಿ ಜಿಲ್ಲೆಯಲ್ಲೂ ನೋಡಲ್ ಏಜೆನ್ಸಿಯ ಮೂಲಕ ಸಂಗ್ರಹ ಮಾಡಿದರೆ ಜೇಂಕಾರ ಎಂಬ ಬ್ರ್ಯಾಂಡ್ ಜನಾನುರಾಗಿಯಾಗಲು ಸಹಕಾರಿ ಆಗುತ್ತದೆ" ಎಂದರು.
ಇದನ್ನೂ ಓದಿ:ರಾಜ್ಯದ ಜೇನು ತುಪ್ಪ ಇನ್ನುಮುಂದೆ 'ಝೇಂಕಾರ' ಬ್ರ್ಯಾಂಡ್: ರೈತರು ಒಡಂಬಡಿಕೆ ಮಾಡಿಕೊಳ್ಳುವುದು ಹೇಗೆ?