ಬೆಂಗಳೂರು:ಪ್ರಮುಖ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ನಗರದ ಆನಂದರಾವ್ ವೃತ್ತದಲ್ಲಿ 50 ಮಹಡಿಯ ಅವಳಿ ಗೋಪುರ ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ. ಘೋಷಣೆಯಾಗಿ ಐದು ವರ್ಷ ಕಳೆದರೂ ಕಾರ್ಯರೂಪಕ್ಕೆ ಬಾರದೇ ಅವಳಿ ಕಟ್ಟಡ ನಿರ್ಮಾಣ ಯೋಜನೆ ಕಡತದಲ್ಲೇ ಬಾಕಿ ಉಳಿದುಕೊಂಡಿತ್ತು. ಬೆಂಗಳೂರಿನ ಅತಿ ಎತ್ತರದ ಅವಳಿ ಕಟ್ಟಡ ಯೋಜನೆಗೆ ಕಾಂಗ್ರೆಸ್ ಸರ್ಕಾರ ಇದೀಗ ಮರುಜೀವ ಕೊಡಲು ತೀರ್ಮಾನಿಸಿದೆ.
2020ರಲ್ಲಿ ಯಡಿಯೂರಪ್ಪ ಸರ್ಕಾರ ಆನಂದ್ ರಾವ್ ವೃತ್ತದ ಬಳಿ ಅತಿ ಎತ್ತರದ ಅವಳಿ ಕಟ್ಟಡ ನಿರ್ಮಾಣದ ಯೋಜನೆ ಘೋಷಿಸಿದ್ದರು. ಬಜೆಟ್ನಲ್ಲಿ 400 ಕೋಟಿ ವೆಚ್ಚದಲ್ಲಿ 25 ಮಹಡಿಗಳ ಕಟ್ಟಡ ನಿರ್ಮಿಸಲು ಆಗಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅನುದಾನ ಘೋಷಿಸಿದ್ದರು. ಬಳಿಕ 2020 ಡಿಸೆಂಬರ್ನಲ್ಲಿ ನಡೆದ ಸಂಪುಟ ಸಭೆಯಲ್ಲಿ ಯೋಜನೆಯ ರೂಪುರೇಷೆಯನ್ನು ಬದಲಿಸಿ ರಾಷ್ಟ್ರೀಯ ನಿರ್ಮಾಣ ನಿಗಮ (ಎನ್‌ಬಿಸಿಸಿ)ದ ಸಹಭಾಗಿತ್ವದಲ್ಲಿ 50 ಮಹಡಿಗಳ ಅವಳಿ ಗೋಪುರ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಅದರಂತೆ 1,250 ಕೋಟಿ ರೂ. ವೆಚ್ಚದಲ್ಲಿ 23.94 ಲಕ್ಷ ಚದರ ಅಡಿ ವಿಸ್ತೀರ್ಣದ 50 ಮಹಡಿಗಳ ಅವಳಿ ಗೋಪುರ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿತ್ತು.
ಎಲ್ಲಾ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವುದು ಇದರ ಪ್ರಮುಖ ಉದ್ದೇಶವಾಗಿದೆ. ಆದರೆ ಐದು ವರ್ಷ ಕಳೆದರೂ ಅವಳಿ ಕಟ್ಟಡ ನಿರ್ಮಾಣ ಕೇವಲ ಬಜೆಟ್ ಘೋಷಣೆಯಾಗಿ ಉಳಿದಿದೆಯೇ ಹೊರತು, ತಳ ಮಟ್ಟದಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಬಳಿಕ ಅವಳಿ ಕಟ್ಟಡ ನಿರ್ಮಾಣಕ್ಕಾಗಿ ಸೂಕ್ತ ವೆಚ್ಚ ಪಾಲುದಾರಿಕೆ ಮಾದರಿಯನ್ನು ಅಂತಿಮಗೊಳಿಸಲು ಸಾಧ್ಯವಾಗದೇ ಯೋಜನೆ ನೇಪತ್ಯಕ್ಕೆ ಸರಿದಿತ್ತು.
ಏನಿದು ಅವಳಿ ಟವರ್ ಯೋಜನೆ?: ಯಡಿಯೂರಪ್ಪ ಸಿಎಂ ಆಗಿದ್ದಾಗ 2020-21ರ ಆಯವ್ಯಯದಲ್ಲಿ ಆನಂದ್ ರಾವ್ ವೃತ್ತದಲ್ಲಿ ಅವಳಿ ಟವರ್ ನಿರ್ಮಾಣ ಯೋಜನೆಯನ್ನು ಘೋಷಿಸಿದ್ದರು. ಆನಂದರಾವ್ ವೃತ್ತದ ಎನ್. ಹೆಚ್ ಕಾಂಪೌಂಡ್‌ನಲ್ಲಿನ 8.78 ಎಕರೆ ಜಮೀನಿನಲ್ಲಿ ಅವಳಿ ಟವರ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದ ಅವಳಿ ಟವರ್ ಆಗಿರಲಿದೆ. ಪ್ರತಿ ಅವಳಿ ಟವರ್ 50 ಮಹಡಿಯನ್ನು ಹೊಂದಿರಲಿದೆ. ಸದ್ಯ ಈ ಜಾಗದಲ್ಲಿರುವ 1940ರ ಮೊದಲು ನಿರ್ಮಿಸಿದ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿದೆ. ಸುಮಾರು 18.50 ಲಕ್ಷ ಚದರ ಅಡಿ ಪ್ರದೇಶದಲ್ಲಿ ಬಿಲ್ಡ್ ಅಫ್ ಏರಿಯಾ ಹೊಂದಿರಲಿದೆ. ಈ ಪ್ರಸ್ತಾಪಿತ ಅವಳಿ ಟವರ್ ಬೆಂಗಳೂರಿನ ಅತಿ ಎತ್ತರದ ಕಟ್ಟಡವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಹಲವು ಸರ್ಕಾರಿ ಕಚೇರಿಗಳು ಬೆಂಗಳೂರಿನಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗುತ್ತಿದೆ. ವಿವಿಧ ಇಲಾಖಾ ಕಚೇರಿಗಳು ಬೇರೆ ಬೇರೆ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ, ಸಕಾಲದಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅನಾನುಕೂಲ ಉಂಟಾಗಿದೆ. ಪ್ರಸ್ತಾವಿತ ಅವಳಿ ಗೋಪುರ ನಿರ್ಮಾಣದಲ್ಲಿ ದೊರಕುವ ಸ್ಥಳಾವಕಾಶದಲ್ಲಿ ನಗರದ ಮಧ್ಯಭಾಗದಲ್ಲಿ ವಿಧಾನಸೌಧ ಹಾಗೂ ವಿಕಾಸಸೌಧದ ಕಚೇರಿಗಳ ಆಸುಪಾಸಿನಲ್ಲಿ ಸರ್ಕಾರಿ ಕಚೇರಿಗಳು ಒಂದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.
ಲೋಕೋಪಯೋಗಿ ಇಲಾಖೆ ನೀಡಿರುವ ಮಾಹಿತಿಯಂತೆ, ಪ್ರಸ್ತುತ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಸರ್ಕಾರಿ ಕಚೇರಿಗಳು ಅಂದಾಜು 27,52,800 ಚ.ಅಡಿ ವಿಸ್ತೀರ್ಣದ ಖಾಸಗಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದಕ್ಕಾಗಿ ಮಾಸಿಕ ಸುಮಾರು 13.60 ಕೋಟಿ ರೂ ಬಾಡಿಗೆಯನ್ನು ಪಾವತಿಸುತ್ತಿವೆ. ಗರಿಷ್ಠ FAR-5 ಅಳವಡಿಸಿಕೊಂಡು ಪ್ರತಿ ಗೋಪುರದಲ್ಲಿಯೂ 50 ಮಹಡಿಗಳು ನಿರ್ಮಾಣ ಕೈಗೊಂಡಲ್ಲಿ ಅಂದಾಜು 18,53,855 ಚ.ಅಡಿ ವಿಸ್ತೀರ್ಣ Built Up Area (BUA) ಲಭ್ಯವಾಗಲಿದೆ. ಅವಳಿ ಗೋಪುರಕ್ಕೆ ಸಮೀಪದ ಎರಡು ಮೆಟ್ರೋ ಸ್ಟೇಷನ್, ರೈಲ್ವೇ ಸ್ಟೇಷನ್, ಮೆಜೆಸ್ಟಿಕ್ ಬಸ್ ನಿಲ್ದಾಣಗಳನ್ನು ಸಂಪರ್ಕಿಸಲು 2 ಕಿ.ಮೀ ಉದ್ದದ ಸ್ಕೈವಾಕ್ ನಿರ್ಮಿಸುವ ಪ್ರಸ್ತಾವನೆ ಹೊಂದಲಾಗಿದೆ. ಬೆಂಗಳೂರಿನ ಆನಂದರಾವ್ ವೃತ್ತದ ಎನ್. ಹೆಚ್ ಕಾಂಪೌಂಡ್ ಆವರಣದಲ್ಲಿರುವ 8.78 ಎಕರೆ ವಿಸ್ತೀರ್ಣದ ನಿವೇಶನ ಪ್ರಸ್ತುತ ಲೋಕೋಪಯೋಗಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಹೆಸರಿನಲ್ಲಿದೆ. ಈ ಯೋಜನೆಯನ್ನು ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಸಂಪೂರ್ಣವಾಗಿ ಲೋಕೋಪಯೋಗಿ ಇಲಾಖೆಯ ಮಾಲೀಕತ್ವಕ್ಕೆ ಆ ಜಾಗವನ್ನು ಪಡೆದು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ.
ಯೋಜನಾ ವೆಚ್ಚದ ಫಾರ್ಮುಲಾ ಅಂತಿಮಗೊಳಿಸುವಲ್ಲೇ ಕಾಲಹರಣ :ಅನುದಾನದ ಕೊರತೆ ಎದುರಿಸುತ್ತಿರುವ ಲೋಕೋಪಯೋಗಿ ಇಲಾಖೆಗೆ ಇಷ್ಟು ದೊಡ್ಡ ಪ್ರಮಾಣದ ವೆಚ್ಚದಲ್ಲಿ ಅವಳಿ ಟವರ್ ನಿರ್ಮಿಸುವುದು ದೊಡ್ಡ ತಲೆನೋವಾಗಿತ್ತು. ಮೊದಲಿಗೆ ಕೇಂದ್ರ ಸರ್ಕಾರದ ಅಧೀನ ಸಂಸ್ಥೆ NBCC ರಾಜ್ಯ ಸರ್ಕಾರದಿಂದ ಯಾವುದೇ ಅನುದಾನವಿಲ್ಲದೆ ಅವಳಿ ಗೋಪುರ ನಿರ್ಮಿಸಲು ನಿರ್ಧರಿಸಿತ್ತು. ಗೋಪುರ ಕಟ್ಟಡದ ಒಟ್ಟಾರೆ ವಿಸ್ತೀರ್ಣದ ಶೇ.60 Built up Area, ರಾಜ್ಯದ 40 Built up Area ಎನ್ಬಿಸಿಸಿಗೆ ಅನುಪಾತದಲ್ಲಿ ಹಂಚಿಕೆ ಆಧಾರದಲ್ಲಿ self revenue generation model ನಂತೆ ಅವಳಿ ಗೋಪುರ ನಿರ್ಮಾಣವನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಡಿಸೆಂಬರ್ 2020ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು.
ಆದರೆ, ಬಳಿಕ ಕೋವಿಡ್ನಿಂದಾಗಿ ಆರ್ಥಿಕ ಸ್ಥಿತಿ ಕುಸಿದಿರುವುದರಿಂದ self revenue generation model ಅಡಿಯಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ವಿಳಂಬವಾಗಿ ಕಾನೂನು ಹೋರಾಟ ಉಂಟಾದಲ್ಲಿ NBCC ಯವರು ಯಾವುದೇ ಅಪಾಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲವೆಂದು ವೆಚ್ಚ ಪಾಲುದಾರಿಕೆಗೆ ಹಿಂದೇಟು ಹಾಕಿತ್ತು. NBCC ಟ್ವಿನ್ ಟವರ್ ನಿರ್ಮಾಣಕ್ಕೆ ಹಲವು ಷರತ್ತುಗಳನ್ನು ವಿಧಿಸಿರುವ ಕಾರಣ 2022ರಲ್ಲಿ ರಾಜ್ಯ ಸರ್ಕಾರ ಅದನ್ನು ಕೈ ಬಿಟ್ಟಿತ್ತು. ಅವಳಿ ಟವರ್ ವಿನ್ಯಾಸ ಮಾದರಿಯನ್ನು FAR-5ನ್ನು (ಕಟ್ಟಡ ನಿರ್ಮಾಣ ಪ್ರದೇಶ ವಿಸ್ತೀರ್ಣದ 5 ಪಟ್ಟುವರೆಗೆ ಫ್ಲೋರ್ ಏರಿಯಾವನ್ನು ನಿರ್ಮಿಸಲು ಅವಕಾಶ) ಅಳವಡಿಸಿಕೊಂಡು ಯೋಜನೆಯನ್ನು ಟೆಂಡರ್ ಪ್ರಕ್ರಿಯೆ ಮೂಲಕ ರಾಜ್ಯ ಸರ್ಕಾರ ಹಾಗೂ ಅರ್ಹ ಪರಿಣಿತ ಡೆವಲಪರ್ಸ್ಗಳೊಂದಿಗೆ Joint Development ಮುಖಾಂತರ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ.
ಹೊಸ 5 ವೆಚ್ಚ ಹಂಚಿಕೆ ಫಾರ್ಮುಲಾ ಪ್ರಸ್ತಾವನೆ ಸಿದ್ಧ: ಇದೀಗ ಟ್ವಿನ್ ಟವರ್ ಯೋಜನೆಗೆ ಆರ್ಥಿಕ ಹೂಡಿಕೆ (ವೆಚ್ಚ ಭರಿಸಲು) ಮಾಡಲು 5 ಮಾದರಿಯ ಪ್ರಸ್ತಾವನೆಯನ್ನು ಲೋಕೋಪಯೋಗಿ ಇಲಾಖೆ ಸಿದ್ಧಪಡಿಸಿದೆ. ಅದರಲ್ಲಿ ಯಾವುದು ಸೂಕ್ತ ಅದನ್ನು ಆಯ್ಕೆ ಮಾಡಲು ವ್ಯವಹಾರ ಸಲಹೆಗಾರರನ್ನು ನೇಮಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.