ಕರ್ನಾಟಕ

karnataka

ETV Bharat / state

ಪೌತಿ ಖಾತೆ ಅಭಿಯಾನಕ್ಕೆ ಸಜ್ಜಾದ ಸರ್ಕಾರ; ಮನೆ ಬಾಗಿಲಿಗೆ ಬಂದು ವಾರಸುದಾರರ ಹೆಸರಿನಲ್ಲಿ ಜಮೀನು ನೋಂದಣಿ - PAUTI KHATHA CAMPAIGN

ರಾಜ್ಯ ಸರ್ಕಾರವು ಪೌತಿ ಖಾತೆ ಅಭಿಯಾನದ ಮೂಲಕ ವಾರಸುದಾರರ ಹೆಸರಿಗೆ ಜಮೀನು ನೋಂದಣಿ ಮಾಡುವ ಕಾರ್ಯಕ್ಕೆ ಮುಂದಾಗಿದೆ.

Vidhanasoudha
ವಿಧಾನಸೌಧ (FILE PHOTO)

By ETV Bharat Karnataka Team

Published : Feb 4, 2025, 7:31 PM IST

ಬೆಂಗಳೂರು : ರಾಜ್ಯದಲ್ಲಿ ಹಲವು ಪ್ರಕರಣಗಳಲ್ಲಿ ಜಮೀನುಗಳ ಖಾತೆಗಳು ಇನ್ನೂ ನಿಧನ ಹೊಂದಿದವರ ಹೆಸರಿನಲ್ಲಿಯೇ ಇವೆ. ಹಾಗಾಗಿ, ಪೌತಿ ಖಾತೆ ಅಭಿಯಾನದ ಮೂಲಕ ವಾರಸುದಾರರ ಹೆಸರಿಗೆ ಜಮೀನು ನೋಂದಣಿ ಮಾಡುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ.

ಈ ಹಿಂದೆ ಪೌತಿ ಖಾತೆ ಅಭಿಯಾನ ರಾಜ್ಯದಲ್ಲಿ ನಡೆದಿತ್ತಾದರೂ ನಿರೀಕ್ಷಿತ ಮಟ್ಟದಲ್ಲಿ ಜಾರಿಗೆ ಬಂದಿಲ್ಲ. ಹೀಗಾಗಿ, ಮೃತರ ಹೆಸರಿನಲ್ಲಿ ಉಳಿದಿರುವ ಜಮೀನಿನ ದಾಖಲೆಗಳನ್ನು ವಾರಸುದಾರರಿಗೆ ವರ್ಗಾವಣೆ ಮಾಡುವ ಸಲುವಾಗಿ ಮನೆ ಬಾಗಿಲಿಗೇ ಪೌತಿ ಖಾತೆ ತಲುಪಿಸುವ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಏನಿದು ಪೌತಿ ಖಾತೆ ?ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿಯನ್ನು ತಮ್ಮ ವಾರಸುದಾರರ ಅಥವಾ ಕುಟುಂಬಸ್ಥರ ಯಾವುದೇ ವ್ಯಕ್ತಿಯ ಹೆಸರಿಗೆ ಜಮೀನಿನ ಖಾತೆಯನ್ನು ವರ್ಗಾವಣೆ ಮಾಡುವುದನ್ನು ಪೌತಿ ಖಾತೆ ಎಂದು ಕರೆಯಲಾಗುತ್ತದೆ.

ಸುಲಭವಾಗಿ ಪೌತಿ ಖಾತೆ ಲಭ್ಯ?ಮನೆ ಬಾಗಿಲಿಗೆ ಹೋಗಿ ಪೌತಿ ಖಾತೆ ಅಭಿಯಾನ ನಡೆಸಿದ್ದಲ್ಲಿ ಅರ್ಹರಿಗೆ ಸುಲಭವಾಗಿ ಪೌತಿಖಾತೆ ಲಭ್ಯವಾಗುತ್ತದೆ. ಜಮೀನಿನ ವಾರಸುದಾರಿಕೆಯ ಪಹಣಿ ಸಿಗುತ್ತದೆ. ಸರ್ಕಾರದ ಬಳಿ ನಿಧನರಾದವರ ಹೆಸರಿನಲ್ಲಿರುವ ನಿಖರ ಮಾಹಿತಿ ಇದ್ದು, ಪೌತಿ ಖಾತೆ ಮಾಡಿಕೊಡುವುದು ಸುಲಭವಾಗಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಂದಾಯ ಇಲಾಖೆಯಲ್ಲೀಗ ಪೌತಿಖಾತೆ ಅಭಿಯಾನ ಆರಂಭಿಸಲಾಗಿದ್ದು, ಯಾವ ಜಿಲ್ಲೆಯಲ್ಲಿ ಕೆಲಸದ ಒತ್ತಡ ಕಡಿಮೆ ಇದೆಯೋ ಅಂತಹ ಜಿಲ್ಲೆಗಳಲ್ಲಿ ಮೊದಲು ಈ ಅಭಿಯಾನ ಕೈಗೆತ್ತಿಕೊಳ್ಳಲಾಗುತ್ತದೆ. ನಂತರ ಬೇರೆ ಬೇರೆ ಜಿಲ್ಲೆಗಳಿಗೆ ಇದನ್ನು ವಿಸ್ತರಿಸಲು ಕಂದಾಯ ಇಲಾಖೆ ಯೋಜನೆ ಹಾಕಿಕೊಂಡಿದೆ.

ಈಗಲೂ ಪಹಣಿಯಲ್ಲಿ ಮೃತರ ಹೆಸರುಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ವಾರಸುದಾರರಿಗೆ ಕೆಲವೊಂದು ಸಮಸ್ಯೆಗಳು ಎದುರಾಗಿವೆ. ಹೀಗಾಗಿ, ವಾರಸುದಾರರಿಗೆ ವರ್ಗಾವಣೆ ಜಮೀನು ಮಾಡಿಕೊಡಲು ಸರ್ಕಾರ ಯೋಜನೆ ರೂಪಿಸಿದೆ.

ಅಭಿಯಾನ ಹೇಗಿದೆ?ಪೌತಿ ಖಾತೆಗಾಗಿ ಈಗಾಗಲೇ ಪ್ರತ್ಯೇಕ ಸಾಫ್ಟ್‌ವೇ‌ರ್ ಸಿದ್ಧವಾಗಿದೆ. ಗ್ರಾಮ ಲೆಕ್ಕಿಗರೇ ಮನೆ ಮನೆಗೆ ಹೋಗುತ್ತಾರೆ. ವಾರಸುದಾರರ ನಿಖರ ಮಾಹಿತಿ ಪಡೆಯುತ್ತಾರೆ. ಇದಕ್ಕೆ ವಂಶವೃಕ್ಷವನ್ನು ಆಧಾರವಾಗಿ ಬಳಸಲಾಗುತ್ತದೆ. ಆಧಾ‌ರ್ ಮೂಲಕವೇ ಒಟಿಪಿ ಪಡೆದು ದಾಖಲು ಮಾಡಲಾಗುತ್ತದೆ. ಒಬ್ಬರಿಗಿಂತ ಹೆಚ್ಚು ವಾರಸುದಾರರ ಪರಿಗಣನೆ ಇದ್ದಲ್ಲಿ ಒಬ್ಬರ ಬಳಿಕ ಒಬ್ಬರ ಹೆಸರು ದಾಖಲು ಮಾಡಿಕೊಂಡು ಒಟಿಪಿ ಪಡೆದು ಖಾತೆ ನೀಡಿಕೆ ಪ್ರಕ್ರಿಯೆ ಆರಂಭಿಸಲಾಗುತ್ತದೆ. ದಾಯಾದಿ ಆಸ್ತಿ ಕಲಹವಿದ್ದರೂ ದಾಖಲಾಗುತ್ತದೆ. ಮೃತ ಮಾಲೀಕರ ದಾಖಲೆ ಇಲ್ಲದಿದ್ದರೆ ಪರ್ಯಾಯವಾಗಿ ಸ್ಥಳ ಮಹಜರು ನಡೆಸಿ, ದಾಖಲೆ ಸೃಷ್ಟಿಸಲಾಗುತ್ತದೆ. ಪೌತಿ ಖಾತೆ ಒಪ್ಪದಿದ್ರೆ ಕೋರ್ಟ್‌ಗೆ ಹೋಗಬಹುದು.

ಅಭಿಯಾನದಿಂದ ಅನುಕೂಲವೇನು?ಅಭಿಯಾನದಲ್ಲೇ ಪೌತಿ ಖಾತೆ ಮಾಡಿಸಿಕೊಳ್ಳುವುದರಿಂದ ನಾಡ ಕಚೇರಿ, ತಾಲೂಕು ಕಚೇರಿಗೆ ಅಲೆದಾಟ ತಪ್ಪಲಿದೆ. ರೈತರಿಗೆ ಸಾಕಷ್ಟು ಸಮಯ ಉಳಿತಾಯವಾಗಲಿದೆ. ಪೌತಿ ಖಾತೆ ಮಾಡಿಸುವ ಸಂದರ್ಭದಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಬ್ರೇಕ್ ಬೀಳಲಿದೆ. ಜಮೀನುಗಳ ವಾರಸುದಾರರಿಗೆ ಸಮಸ್ಯೆ ಇಲ್ಲದೇ ಪೌತಿ ಖಾತೆ ಸಿಗುತ್ತದೆ.

ನಾಡಕಚೇರಿಯಲ್ಲೂ ಅರ್ಜಿ ಲಭ್ಯ?ಪೌತಿ/ ವಾರಸಾ ಖಾತೆ ಮಾಡಿಕೊಳ್ಳಲು ನಮೂನೆ-1 ಅರ್ಜಿ ರಾಜ್ಯದ ಎಲ್ಲಾ ನಾಡಕಚೇರಿಗಳಲ್ಲೂ ಲಭ್ಯವಿದೆ. ಪೌತಿ ಖಾತೆ ಮಾಡಿಸುವ ಬಗ್ಗೆ ತಿಳಿದುಕೊಳ್ಳುವುದಾದರೆ, ಸರ್ಕಾರ ಸೂಚಿಸಿರುವ ಮೂಲಗಳಿಂದ ಮರಣ ಹೊಂದಿದ ವಿವರ ಪಡೆಯಬೇಕು. ಮರಣ ಪ್ರಮಾಣಪತ್ರ ಮತ್ತು ವಂಶವೃಕ್ಷ ಪಡೆದು ಭೂಮಿ ತಂತ್ರಾಂಶ ಪೌತಿ ಖಾತೆಗಾಗಿ ನಮೂನೆ- 1 ರಲ್ಲಿ ದಾಖಲಿಸಬೇಕು. ಒಂದು ವೇಳೆ ವಂಶವೃಕ್ಷ ಲಭ್ಯವಿರದಿದ್ದರೆ ಅರ್ಜಿದಾರರು ಕುಟುಂಬದ ಮಾಹಿತಿಯನ್ನು ನೋಟರಿ ಮಾಡಿ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ದಾಖಲಿಸಬೇಕು.

ವ್ಯಕ್ತಿ ಮರಣ ಹೊಂದಿ ವರ್ಷ ಮೀರಿದ್ದು, ಮರಣ ನೋಂದಣಿಯಾಗದಿದ್ದಲ್ಲಿ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಮರಣ ಕುರಿತ ಆದೇಶ ಪಡೆದು ತಹಶಿಲ್ದಾರ್ ಕಚೇರಿಯಲ್ಲಿ ಮರಣ ಪತ್ರವನ್ನು ಪಡೆಯಬಹುದು ಅಥವಾ ಆಧಾರ್, ಪಡಿತರ ಚೀಟಿ ದಾಖಲೆ ಪರಿಶೀಲಿಸಿಕೊಂಡು ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು ಸ್ಥಳ ಪರಿಶೀಲನೆ ಮಹಜರ್ ಮಾಡಿ, ಮರಣ ಹೊಂದಿದ ಬಗ್ಗೆ ಸಂಬಂಧಪಟ್ಟ ವಾರಸುದಾರರಿಂದ ಅಫಿಡವಿಟ್ ಪಡೆದು ಅವರ ಆಧಾರ್, ಪಡಿತರ ಚೀಟಿ ಲಿಂಕ್ ಮೇಲೆ ಅರ್ಜಿ ದಾಖಲಿಸಬಹುದು.

ಲಭ್ಯ ಮಾಹಿತಿ ಪ್ರಕಾರ, ಕೆಲವು ಆಸ್ತಿಗಳಿಗೆ ಈಗ ಎರಡು ಅಥವಾ ಮೂರನೇ ತಲೆಮಾರಿನವರು ವಾರಸುದಾರರಾಗಿದ್ದರೆ, ಇನ್ನೂ ಕೆಲ ಆಸ್ತಿಗಳಿಗೆ ನಾಲ್ಕನೇ ತಲೆಮಾರಿನವರ ಮಾಲೀಕತ್ವವಿದೆ. ಅಂತಹವರಿಗೂ ವಿಎಗಳ ಮೂಲಕ ಪೌತಿ ಖಾತೆ ಮಾಡಿಸಿಕೊಡುವ ಕೆಲಸವನ್ನು ಸರ್ಕಾರ ಮಾಡಲಿದೆ.

ರಾಜ್ಯದಲ್ಲಿರುವ 4.11 ಕೋಟಿ ಜಮೀನುಗಳನ್ನು ಆಧಾರ್ ಮೂಲಕ ಇ-ಕೆವೈಸಿ ಮಾಡಲು ಪ್ರಯತ್ನಿಸಲಾಗಿದೆ. ಅದರಲ್ಲಿ 3.5 ಕೋಟಿ ಜಮೀನುಗಳ ಮಾಲೀಕರು ಸಂಪರ್ಕಕ್ಕೆ ಲಭ್ಯವಾಗಿದ್ದಾರೆ. 2.2 ಕೋಟಿ ಜಮೀನು ಇ-ಕೆವೈಸಿ ಮಾಡಲಾಗಿದೆ. 51.13 ಲಕ್ಷ ಜಮೀನುಗಳ ಮಾಲೀಕರು ನಿಧನರಾಗಿದ್ದಾರೆ. ಸುಮಾರು 70 ಲಕ್ಷ ಜಮೀನುಗಳು ಕೃಷಿಯೇತರ ಉದ್ದೇಶಕ್ಕೆ ಬಳಕೆಯಾಗುತ್ತಿರುವುದು ಪತ್ತೆಯಾಗಿದೆ. ಇನ್ನೂ 60 ಲಕ್ಷ ಜಮೀನುಗಳ ರೈತರನ್ನು ಸಂಪರ್ಕ ಮಾಡಬೇಕಾಗಿದೆ. ರಾಜ್ಯದಲ್ಲಿ ಶೇ.75 ಸಣ್ಣ, ಅತಿಸಣ್ಣ ರೈತರಿರುವುದು ಕಂಡು ಬಂದಿದೆ. ಇನ್ನು, ರಾಜ್ಯದಲ್ಲಿರುವ ಆಸ್ತಿಗಳ ಪೈಕಿ ಶೇ.30ಕ್ಕೂ ಹೆಚ್ಚಿನ ಜಮೀನುಗಳು ಮಹಿಳೆಯರ ಹೆಸರಿನಲ್ಲಿರುವುದು ಗೊತ್ತಾಗಿದೆ.

"ನ್ಯಾಯಾಲಯಗಳಲ್ಲಿ ತಕರಾರು ಪ್ರಕರಣಗಳ ವಿಲೇವಾರಿಯ ಜೊತೆಗೆ ಪೋಡಿ ದುರಸ್ತಿ, ನಮೂನೆ 3-9 ಮಿಸ್ಮ್ಯಾಚ್ ಹಾಗೂ ಪೌತಿ ಖಾತೆ ಆಂದೋಲನ ಉಪ ವಿಭಾಗಾಧಿಕಾರಿಗಳ ಮಟ್ಟದಲ್ಲೇ ನಡೆಯಬೇಕು. ಹೀಗಾಗಿ, ಅಧಿಕಾರಿಗಳು ಜನರ ಸಮಸ್ಯೆ ಹಾಗೂ ತಮ್ಮ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಕೆಲಸಗಳನ್ನೂ ಅಭಿಯಾನ ಮಾದರಿಯಲ್ಲಿ ನಡೆಯಬೇಕಿದೆ. ಪೌತಿ ಖಾತೆ ಅಭಿಯಾನಕ್ಕೂ ಗಮನ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ" ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಇದನ್ನೂ ಓದಿ :ಬಿ ಖಾತಾ ಪ್ರಕ್ರಿಯೆ ಪೂರ್ಣಗೊಳಿಸಿ, ಅನಧಿಕೃತ ಬಡಾವಣೆ ತಲೆಎತ್ತದಂತೆ ನೋಡಿಕೊಳ್ಳಬೇಕು: ಸಿಎಂ ಸೂಚನೆ - B KHATA PROCESS

ABOUT THE AUTHOR

...view details