ಕರ್ನಾಟಕ

karnataka

ETV Bharat / state

ಡೆಂಗ್ಯೂ ʼಸಾಂಕ್ರಾಮಿಕ ರೋಗʼ ಎಂದು ಘೋಷಿಸಿದ ಸರ್ಕಾರ: ಇನ್ಮುಂದೆ ಮಾರ್ಗಸೂಚಿ ಪಾಲಿಸದಿದ್ದರೆ ಬೀಳುತ್ತೆ ದಂಡ! - Dengue declared as an epidemic - DENGUE DECLARED AS AN EPIDEMIC

ಡೆಂಗ್ಯೂ ಜ್ವರವನ್ನು ಸಾಂಕ್ರಾಮಿಕ ರೋಗ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಸೊಳ್ಳೆಗಳ ನಿಯಂತ್ರಣ ಮಾಡದಿದ್ದರೆ ಸರ್ಕಾರ ದಂಡಾಸ್ತ್ರ ಪ್ರಯೋಗ ಮಾಡಲಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : Sep 3, 2024, 10:17 PM IST

Updated : Sep 3, 2024, 10:38 PM IST

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (ETV Bharat)

ಬೆಂಗಳೂರು:ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಡೆಂಗ್ಯೂ ಜ್ವರವನ್ನು ʼಸಾಂಕ್ರಾಮಿಕ ರೋಗʼ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಈ ಕುರಿತು ವಿಕಾಸಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಡೆಂಗ್ಯೂ ಸಾಂಕ್ರಾಮಿಕ ರೋಗವನ್ನಾಗಿ ಘೋಷಿಸುವುದರ ಜೊತೆಗೆ ಡೆಂಗ್ಯೂ ನಿಯಂತ್ರಣ ಮಾರ್ಗಸೂಚಿಗಳನ್ನು ಪಾಲಿಸದವರಿಗೆ ದಂಡ ಕೂಡ ಹಾಕಲಾಗುವುದು ಎಂದು ಹೇಳಿದರು.

ಇದರಿಂದ ಆರೋಗ್ಯ ಇಲಾಖೆಗೆ ಡೆಂಗ್ಯೂ ಸೊಳ್ಳೆ ಉತ್ಪತ್ತಿ ತಾಣಗಳನ್ನ ಹತೋಟಿಗೆ ತರುವ ನಿಟ್ಟಿನಲ್ಲಿ ಕಾನೂನಿನ ಅಸ್ತ್ರ ಬಳಸಬಹುದಾಗಿದೆ. ಈ ಹಿಂದೆ ಬೆಂಗಳೂರು ಮತ್ತು ಮಂಗಳೂರು ಬಿಟ್ಟರೆ ರಾಜ್ಯದ ಬೇರೆ ಪ್ರದೇಶಗಳಲ್ಲಿ ಕಾನೂನಿನ ರೀತಿ ಕ್ರಮ ಕೈಗೊಳ್ಳಲು ಅವಕಾಶ ಇರಲಿಲ್ಲ ಎಂದರು.

ಡೆಂಗ್ಯೂ ಮಾರ್ಗಸೂಚಿಗಳನ್ನ ಪಾಲಿಸದಿದ್ದರೆ, ಗ್ರಾಮೀಣ ಪ್ರದೇಶದ ಮನೆಗಳಿಗೆ 200 ರೂ ಹಾಗೂ ನಗರ ಪ್ರದೇಶಗಳಲ್ಲಿ 400 ರೂಪಾಯಿ ದಂಡ ವಿಧಿಸಲಾಗುವುದು. ಅಲ್ಲದೇ ಶಾಲಾ ಕಾಲೇಜು, ಹೋಟೆಲ್​, ಲಾಡ್ಜ್, ರೆಸಾರ್ಟ್​ಗಳು ಸೇರಿದಂತೆ ವಾಣಿಜ್ಯ ಸಂಘ, ಸಂಸ್ಥೆಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ 500 ಹಾಗೂ ನಗರ ಪ್ರದೇಶಗಳಲ್ಲಿ 1000 ರೂ. ದಂಡ ನಿಗದಿಪಡಿಸಲಾಗಿದ್ದು, ಕಟ್ಟಡ ನಿರ್ಮಾಣ, ಹೊರಾಂಗಣ ಸ್ಥಳಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ 1000 ರೂ ಹಾಗೂ ನಗರ ಪ್ರದೇಶಗಳಲ್ಲಿ 2000 ರೂ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಈಡಿಸ್ ಸೊಳ್ಳೆಗಳ ಲಾರ್ವಾ ಉತ್ಪತ್ತಿಗೆ ಅನುಕೂಲವಾಗುವಂತೆ ನೀರು ಸಂಗ್ರಹಣೆಯಾಗಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಎಚ್ಚರಿಕೆ ವಹಿಸುವುದು ಮುಖ್ಯ. ದಂಡ ವಿಧಿಸುವುದಕ್ಕಿಂತ ಜನರು ಡೆಂಗ್ಯೂ ವಿಚಾರದಲ್ಲಿ ಜವಾಬ್ದಾರಿಯುತವಾಗಿ ಮುನ್ನೆಚ್ಚರಿಕೆ ವಹಿಸಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಈ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನಿಯಮ ಜಾರಿಗೊಳಿಸುವ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.

ಕೋವಿಡ್ ಅಕ್ರಮ ರಿಪೋರ್ಟ್: ಕೋವಿಡ್ ಅಕ್ರಮ ಕುರಿತಂತೆ ನಿವೃತ್ತ ನ್ಯಾಯಮೂರ್ತಿ ಕುನ್ನಾ ಅವರು ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದು, ವರದಿಯಲ್ಲಿರುವ ಅಂಶಗಳನ್ನು ಆಧರಿಸಿ ಮುಂದಿನ ಕ್ರಮ ಆಗಲಿದೆ. ವರದಿಯಲ್ಲಿ ಏನಿದೆ ಎಂಬುದು ನಮಗೆ ತಿಳಿದಿಲ್ಲ. ಆದರೆ, ಸುಧಾಕರ್ ಅವರು ಮಾತ್ರ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಬಹುಶಃ ಕೋವಿಡ್ ಸಂದರ್ಭದಲ್ಲಿ ಅವರು ಮಾಡಿರುವ ತಪ್ಪುಗಳ ಗಿಲ್ಟಿ ಸುಧಾಕರ್ ಅವರಿಗೆ ಕಾಡುತ್ತಿರಬಹುದು ಎಂದರು.

ತಜ್ಞರ ಸಮಿತಿ ಕೋವಿಡ್​ ಅಕ್ರಮದ ಬಗ್ಗೆ ವರದಿ ಸಲ್ಲಿಕೆ ಮಾಡಿದೆ.‌ ವರದಿಯಲ್ಲಿ ಇಂಥವರ ಹೆಸರು ಇದೆ ಎಂದು ನಾವು ಹೇಳಿಲ್ಲ. ಸುಧಾಕರ್ ಅವರೇ ತಮ್ಮ ಬಗ್ಗೆ ತಾವು ಆರೋಪ ಮಾಡಿಕೊಳ್ಳುತ್ತಿದ್ದಾರೆ. ಬೀದಿಲಿ ನಿಂತಕೊಂಡು ಕೆಲಸ ಮಾಡಿದ್ದೇನೆ ಎಂದು ಸುಧಾಕರ್ ಹೇಳಿಕೊಳ್ಳುತ್ತಿದ್ದಾರೆ. ಅವರು ಏಲ್ಲಿ ನಿಂತು ಕೆಲಸ ಮಾಡಿದ್ದಾರೆ ನಾವು ನೋಡಿದ್ದೇವೆ. ಮಂತ್ರಿ ಮಾಡುವುದೇ ಕೆಲಸ ಮಾಡಲಿಕ್ಕೆ. ಹಾಗಿದ್ದಾಗ ಕೆಲಸ ಮಾಡುವುದು ಮಂತ್ರಿಗಳ ಕರ್ತವ್ಯ. ಅದನ್ನ ನಾವು ಹೇಳಿಕೊಳ್ಳುವುದಲ್ಲ. ಜನರು ನಮ್ಮ ಕೆಲಸದ ಬಗ್ಗೆ ಮಾತಾಡಬೇಕು ಎಂದು ಸಚಿವರು ಹೇಳಿದರು.

ಇದನ್ನೂ ಓದಿ:ಮಂಗಳೂರು ಆಯುಷ್ ಆಸ್ಪತ್ರೆಗೆ ಉಪಕರಣ ಖರೀದಿ ಪ್ರಕರಣ; ಪ್ರಧಾನ ಕಾರ್ಯದರ್ಶಿಗಳ ಮಟ್ಟದ ತನಿಖೆಗೆ ಆರೋಗ್ಯ ಸಚಿವರ ಆದೇಶ - Dinesh Gundu Rao

Last Updated : Sep 3, 2024, 10:38 PM IST

ABOUT THE AUTHOR

...view details