ಮಂಗಳೂರು: ಧಾರ್ಮಿಕ ನಿಂದನೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನಗರದ ಸಂತ ಜೆರೋಸಾ ಶಿಕ್ಷಣ ಸಂಸ್ಥೆಯು ಶಿಕ್ಷಕಿ ಸಿಸ್ಟರ್ ಪ್ರಭಾ ಎಂಬವರನ್ನು ಕೆಲಸದಿಂದ ವಜಾ ಮಾಡಿದೆ. ಸಿಸ್ಟರ್ ಪ್ರಭಾ ತರಗತಿಯಲ್ಲಿ ಧಾರ್ಮಿಕ ನಿಂದನೆ ಮತ್ತು ಪ್ರಧಾನಮಂತ್ರಿಗಳನ್ನು ನಿಂದಿಸಿದ್ದಾರೆ ಎಂದು ಪೋಷಕರು ಆಡಿಯೋ ಮೂಲಕ ಹಿಂದೂ ಸಂಘಟನೆಗಳ ಗಮನಕ್ಕೆ ತಂದಿದ್ದರು. ಶನಿವಾರ ಪೋಷಕರು ಶಾಲಾ ಗೇಟ್ ಬಳಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಜೆಪ್ಪುವಿನಲ್ಲಿರುವ ಶಿಕ್ಷಣ ಸಂಸ್ಥೆ ಮುಂದೆ ಜಮಾಯಿಸಿ ಶಿಕ್ಷಕಿಯ ಅಮಾನತಿಗೆ ಆಗ್ರಹಿಸಿದ್ದರು. ಸಂಜೆಯ ವೇಳೆಗೆ ಶಾಲೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಶಾಲಾ ಆಡಳಿತ ಮಂಡಳಿಯೊಂದಿಗೆ ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದರು.
ಆ ಬಳಿಕ ಮುಖ್ಯ ಶಿಕ್ಷಕಿ ಸಿಸ್ಟರ್ ಅನಿತಾ ಮಾತನಾಡಿ, "ಸಿಸ್ಟರ್ ಪ್ರಭಾ ಅವರನ್ನು ಈ ಕ್ಷಣದಿಂದ ನಮ್ಮ ಸಂಸ್ಥೆಯಿಂದ ವಜಾಗೊಳಿಸಲಾಗಿದೆ. ಅವರ ಸ್ಥಾನಕ್ಕೆ ಮತ್ತೊಬ್ಬ ಶಿಕ್ಷಕರನ್ನು ನೇಮಿಸಲಾಗುತ್ತದೆ. ಈ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ. ತನಿಖೆ ಪಾರದರ್ಶಕದಿಂದ ಕೂಡಿರಲು ನಮ್ಮ ಸಹಕಾರಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ತನಿಖೆಯ ಅಂತಿಮ ಆದೇಶಕ್ಕೆ ಬದ್ಧರಾಗಿದ್ದೇವೆ. ನಮ್ಮ ಸಂಸ್ಥೆಯ 60 ವರ್ಷದ ಇತಿಹಾಸದಲ್ಲಿ ಇಂತಹ ಘಟನೆಗಳು ಈ ಹಿಂದೆ ನಡೆದಿಲ್ಲ" ಎಂದರು.