ದಾವಣಗೆರೆ: ನಿಯಂತ್ರಣ ಕಳೆದುಕೊಂಡು ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷರಿದ್ದ ಕಾರು ಡಿವೈಡರ್ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿರುವ ಘಟನೆ ದಾವಣಗೆರೆಯ ರಿಂಗ್ ರಸ್ತೆಯ ಕ್ಲಾಕ್ ಟವರ್ ಬಳಿ ಇಂದು ನಡೆದಿದೆ. ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರು ಅಪಘಾತಕ್ಕೆ ಅತೀ ವೇಗ ಪ್ರಮುಖ ಕಾರಣ ಎಂಬುದು ಪ್ರತ್ಯಕ್ಷದರ್ಶಿಗಳ ವಾದವಾಗಿದೆ. ಕಾರು ದಾವಣಗೆರೆ ನಗರದ ಎಸ್ಎಸ್ ಲೇಔಟ್ನ ಶಾರದಾಂಬ ದೇವಾಲಯದ ಕಡೆಯಿಂದ ಅತೀ ವೇಗವಾಗಿ ಆಗಮಿಸಿ ನಿಜಲಿಂಗಪ್ಪ ಲೇಔಟ್ ಬಳಿಯ ರಿಂಗ್ ರಸ್ತೆ ಕ್ಲಾಕ್ ಟವರ್ನ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಬಳಿಕ ಅದೇ ಡಿವೈಡರ್ ಬಳಿ ಸಾಗುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಅಪ್ಪಳಿಸಿ ಅದೇ ರಸ್ತೆ ಬದಿಯಲ್ಲಿದ್ದ ಸೆಕೆಂಡ್ಸ್ ಕಾರು ಶೋರೂಂಗೆ ನುಗ್ಗಿದೆ. ಇದರ ಪರಿಣಾಮ ಶೋರೂಂನಲ್ಲಿದ್ದ ಎರಡು ಕಾರುಗಳು ಜಖಂ ಆಗಿವೆ.