ಬೆಂಗಳೂರು: ಕರ್ನಾಟಕ ಹೈಕೋರ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶ್ರವಣದೋಷವುಳ್ಳ ವಕೀಲೆ ಕೌಟುಂಬಿಕ ವ್ಯಾಜ್ಯ ಪ್ರಕರಣದಲ್ಲಿ ವಾದ ಮಂಡಿಸುವ ಮೂಲಕ ಇತಿಹಾಸ ಸೃಷ್ಟಿಸಿದರು.
ಕೌಟುಂಬಿಕ ಪ್ರಕರಣವೊಂದರಲ್ಲಿ ಪತಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಶ್ರವಣ ದೋಷವುಳ್ಳ ವಕೀಲೆ ಸಾರಾ ಸನ್ನಿ ಅವರಿಂದ ವಾದ ಆಲಿಸಿತು. ಅಲ್ಲದೆ, ನ್ಯೂನತೆಯನ್ನು ಮೀರಿ ದುಭಾಷಿ (Interpreter) ನೆರವಿನಿಂದ ವಾದಿಸಿದ ಸಾರಾ ಪ್ರಯತ್ನಕ್ಕೆ ನ್ಯಾಯಪೀಠ ಮೆಚ್ಚುಗೆ ಸೂಚಿಸಿತು. ದುಭಾಷಿಗೆ ಸಂಜ್ಞೆಗೆ ಹೊಂದಿಕೊಳ್ಳಲು ಮತ್ತಷ್ಟು ಕಾಲಾವಕಾಶದ ಅಗತ್ಯವಿದೆ ಎಂದು ಪೀಠ ತಿಳಿಸಿತು.
ವಿಚಾರಣೆ ಪೂರ್ಣಗೊಂಡ ಬಳಿಕ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ಈ ಹಿಂದೆ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಪೀಠದ ಮುಂದೆ ಸಾರಾ ವಾದ ಮಂಡಿಸಿದ್ದರು. ಕರ್ನಾಟಕ ಹೈಕೋರ್ಟ್ ಸಾರಾಗೆ ವಾದಿಸಲು ಅವಕಾಶ ಕಲ್ಪಿಸಿಕೊಡುವ ಮೂಲಕ ಶ್ರವಣ ದೋಷವುಳ್ಳ ವಕೀಲರಿಗೆ ವಾದಿಸಲು ಅವಕಾಶ ಕಲ್ಪಿಸಿದ ದೇಶದ ಮೊದಲ ಹೈಕೋರ್ಟ್ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ತಿಳಿಸಿದರು. ಅಲ್ಲದೆ, ಪೀಠಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು. ಎಲ್ಲರಿಗೂ ಧನ್ಯವಾದ ಸಲ್ಲಿಸಿದ ನ್ಯಾಯಮೂರ್ತಿ ನ್ಯಾ.ನಾಗಪ್ರಸನ್ನ ಅವರು ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 19ಕ್ಕೆ ಮುಂದೂಡಿದರು.
ವೇಳೆ, ಎಲ್‌ಒಸಿ ಹಿಂಪಡೆದು ಪತಿಯನ್ನು ವ್ಯಾಪ್ತಿ ಹೊಂದಿದ ಪೊಲೀಸರ ಮುಂದೆ ಹಾಜರುಪಡಿಸುವಂತೆ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿ ಆಧರಿಸಿ ಪತಿಯನ್ನು ಪ್ರವಾಸ ಕೈಗೊಳ್ಳಲು ಮ್ಯಾಜಿಸ್ಟ್ರೇಟ್ ಅನುಮತಿಸಿದ್ದರು. ಈ ಹಿನ್ನೆಲೆಯಲ್ಲಿ ದೇಶ ತೊರೆದ ಪತಿಯನ್ನು ಬಂಧಿಸುವಂತೆ ಪತ್ನಿ ಕೋರಿದ್ದರು. ಅಲ್ಲದೇ, ಲುಕ್‌ಔಟ್ ಸುತ್ತೋಲೆ ಹೊರಡಿಸಿದ ವ್ಯಕ್ತಿ ಭಾರತಕ್ಕೆ ಮರಳಿದಾಗ ಅನುಸರಿಸಬೇಕಾದ ಮಾರ್ಗಸೂಚಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ವಕೀಲರು ಸನ್ನೆಯ ಮೂಲಕ ಕೋರಿದ್ದರು.