ಬೆಳಗಾವಿ:ಸವದತ್ತಿ ಯಲ್ಲಮ್ಮ ಶಕ್ತಿ ದೇವಿ. ಕೋಟ್ಯಂತರ ಭಕ್ತರ ಪಾಲಿನ ಆರಾಧ್ಯ ದೇವತೆ. ಭಾಷೆ, ಜಾತಿ, ಗಡಿ, ಸೀಮೆಗಳ ಎಲ್ಲೆ ಮೀರಿ ಭಕ್ತಿಯ ಹೊಳೆ ಹರಿಸುವ ಮಹಾತಾಯಿ ಎಂಬುದು ಭಕ್ತರ ನಂಬಿಕೆ. ರಾಜ್ಯದಲ್ಲೇ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣವಾಗಿ ಸಮೀಪದ ಯಲ್ಲಮ್ಮನಗುಡ್ಡ ಖ್ಯಾತಿ ಗಳಿಸಿದೆ. ಸ್ವತಃ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರೇ ಹೇಳುವಂತೆ ರಾಜ್ಯದಲ್ಲೇ ಹೆಚ್ಚು ಪ್ರವಾಸಿಗರು ಯಲ್ಲಮ್ಮನಗುಡ್ಡಕ್ಕೆ ಭೇಟಿ ನೀಡುತ್ತಾರೆ. ಆದರೆ, ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸದೇ ಇರುವುದು ವಿಪರ್ಯಾಸ.
ಆದರೆ, ಇತ್ತೀಚೆಗೆ ಯಲ್ಲಮ್ಮನ ಗುಡ್ಡದಲ್ಲಿ ಒಂದಿಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಆದರೆ, ದೇಶ-ವಿದೇಶದಿಂದ ಬರುವ ಪ್ರವಾಸಿಗರು ಉಳಿದುಕೊಳ್ಳಲು ಸ್ಟಾರ್ ಹೋಟೆಲ್, ಗುಡ್ಡದ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಲು ಟೂರಿಸ್ಟ್ ಗೈಡ್ಗಳ ಕೊರತೆಯಿದೆ. ಇನ್ನು ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗಗಳಲ್ಲಿ ಸೂಚನಾ ಫಲಕಗಳಿಲ್ಲ. ಗುಡ್ಡದ ಸಮೀಪದಲ್ಲೇ ಮಲಪ್ರಭಾ ನದಿ ಹರಿದು ಹೋಗಿದ್ದು, ಅಲ್ಲಿಯೂ ವಾಟರ್ ಸ್ಪೋರ್ಟ್ಸ್ ಯೋಜನೆ ಕೈಗೊಂಡರೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಬಹುದು. ಆದರೆ, ಪ್ರವಾಸೋದ್ಯಮ ಇಲಾಖೆ ಇತ್ತ ಆಸಕ್ತಿ ತೋರುತ್ತಿಲ್ಲ ಎಂಬುದು ಭಕ್ತರ ದೂರು.
ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲರ ಆಸಕ್ತಿಯಿಂದ ಯಲ್ಲಮ್ಮನಗುಡ್ಡ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. ಈಗಲಾದರೂ ಗುಡ್ಡದಲ್ಲಿ ಅಭಿವೃದ್ಧಿ ಹೊಳೆ ಹರಿದು, ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಸಿಗಬಹುದೆಂಬ ನಿರೀಕ್ಷೆ ಈ ಭಾಗದ ಜನರದ್ದು.
ಒಂದೂವರೆ ವರ್ಷದಲ್ಲಿ 2.44 ಕೋಟಿ ಭಕ್ತರ ಭೇಟಿ:2023ರಲ್ಲಿ ಯಲ್ಲಮ್ಮನಗುಡ್ಡಕ್ಕೆ 1,88,01,300 ಭಕ್ತರು ಭೇಟಿ ನೀಡಿದ್ದಾರೆ. 2024ರ ಜನವರಿ 1ರಿಂದ ಜೂನ್ 30ರವರೆಗೆ 56,25,500 ಭಕ್ತರು ಆಗಮಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಕಳೆದ ಒಂದೂವರೆ ವರ್ಷದಲ್ಲಿ 2,44,26,800 ಪ್ರವಾಸಿಗರು ಗುಡ್ಡಕ್ಕೆ ಬಂದು ಹೋಗಿದ್ದಾರೆ. ಇನ್ನು ಒಂದೂವರೆ ವರ್ಷದಲ್ಲಿ ಬೆಳಗಾವಿ ಜಿಲ್ಲೆಗೆ 5.95 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದು, ಈ ಪೈಕಿ ಯಲ್ಲಮ್ಮನಗುಡ್ಡಕ್ಕೆ ಭೇಟಿ ನೀಡಿದ್ದು 2.44 ಕೋಟಿಗೂ ಅಧಿಕ ಜನ. ಉಳಿದಂತೆ ಸವದತ್ತಿಯ ಜೋಗುಳಬಾವಿ ಸತ್ಯಮ್ಮನ ದೇವಸ್ಥಾನಕ್ಕೆ 1.54 ಕೋಟಿ, ಗೋಕಾಕ ಜಲಪಾತಕ್ಕೆ 17.27 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅಲ್ಲದೇ ಈವರೆಗೆ 119 ವಿದೇಶಿಗರು ಆಗಮಿಸಿದ್ದು ವಿಶೇಷ.
ಸ್ವಚ್ಛತೆಗೆ ಆದ್ಯತೆ ನೀಡಿ:ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ದೇವಸ್ಥಾನದ ಆಡಳಿತ ಮಂಡಳಿಗೆ ಸಾಧ್ಯವಾಗುತ್ತಿಲ್ಲ. ದೇವಸ್ಥಾನ ಸುತ್ತಮುತ್ತಲೂ ಸ್ವಚ್ಛತೆ ಅಷ್ಟಕ್ಕಷ್ಟೇ. ಶೌಚಾಲಯ, ಕುಡಿಯುವ ನೀರು, ಭಕ್ತರು ಉಳಿದುಕೊಳ್ಳಲು ಯಾತ್ರಿ ನಿವಾಸಗಳು, ಸ್ವಚ್ಛತೆ ಕಾಪಾಡುವುದು, ಬಸ್ ಸೌಕರ್ಯ, ವ್ಯಾಪಾರಕ್ಕೆ ಮಳಿಗೆಗಳು ಸೇರಿ ಮತ್ತಿತರ ಸೌಕರ್ಯಗಳನ್ನು ಕಲ್ಪಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.