ಶಿವಮೊಗ್ಗ:ಬನವಾಸಿ ಕದಂಬರು ಕರ್ನಾಟಕದ ಮೊದಲ ರಾಜ ಮನೆತನವಾಗಿದೆ. ಈ ರಾಜ ಮನೆತನದ ಮೊದಲ ರಾಜ ಮಯೂರ ವರ್ಮ ಕನ್ನಡವನ್ನು ತನ್ನ ಆಡಳಿತ ಭಾಷೆಯನ್ನಾಗಿ ಮಾಡಿಕೊಂಡು ಕನ್ನಡ ಅಸ್ಮಿತೆಯ ಬೀಜವನ್ನು ಬಿತ್ತಿದ್ದರು.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತಾಳಗುಂದದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಮಯೂರ ಶರ್ಮ ಜನಿಸಿ, ಇಲ್ಲೇ ವಿದ್ಯಾಭ್ಯಾಸ ನಡೆಸಿ ಬಳಿಕ ಹೆಚ್ಚಿನ ಶಿಕ್ಷಣ ಪಡೆಯುವ ಹಂಬಲದಿಂದ ತನ್ನ ತಾತನ ಜೊತೆ ತಮಿಳುನಾಡಿನ ಕಂಚಿಗೆ ತೆರಳಿದ್ದರು. ಕೆಲ ವರ್ಷಗಳ ಬಳಿ ಮಯೂರ ಶರ್ಮ ವಿದ್ಯಾಪಾರಂಗತರಾಗುತ್ತಾರೆ. ಅಶ್ವವನ್ನು ಯಜ್ಞ ಕುಂಡದ ಬಳಿ ಬಲಿಕೊಡುವುದನ್ನು ಮಯೂರ ಶರ್ಮ ವಿರೋಧಿಸುತ್ತಾರೆ. ಇದರಿಂದ ಪಲ್ಲವ ಕ್ಷತ್ರಿಯರು ಮಯೂರ ಶರ್ಮನನ್ನು ಕಟುವಾದ ಮಾತುಗಳಿಂದ ನಿಂದಿಸುತ್ತಾರೆ.
ಶರ್ಮನಿಂದ ವರ್ಮನಾಗಿದ್ದು ಹೇಗೆ?:ಈ ಅವಮಾನದಿಂದ ಆಕ್ರೋಶಗೊಂಡ ಮಯೂರ ಶರ್ಮನಲ್ಲಿ ಪಲ್ಲವರ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂಬ ದೃಢಸಂಕಲ್ಪ ತೀವ್ರಗೊಂಡಿತು. ತಾನೂ ಕ್ಷತ್ರಿಯನಾಗಿ ಸೈನ್ಯವನ್ನು ಕಟ್ಟಿ, ಪಲ್ಲವರನ್ನು ಸೋಲಿಸಬೇಕೆಂದು ನಿಶ್ಚಯಿಸಿ ಮೈಮೇಲೆ ಇದ್ದ ಜನಿವಾರವನ್ನು ತೆಗೆದುಹಾಕಿ ಕೈಯಲ್ಲಿ ಖಡ್ಗವನ್ನು ಹಿಡಿಯುತ್ತಾರೆ. ಈ ಮೂಲಕ ಬ್ರಾಹ್ಮಣನಾಗಿದ್ದ ಮಯೂರ ಕ್ಷತ್ರಿಯರಾಗುತ್ತಾರೆ. ಬನವಾಸಿಗೆ ಹೋಗಿ 'ಕದಂಬ ವಂಶ' ಸ್ಥಾಪಿಸಿ 'ಮಯೂರ ಶರ್ಮ' ಎಂದಿದ್ದ ಹೆಸರು 'ಮಯೂರ ವರ್ಮ' ಎಂದಾಗುತ್ತದೆ ಎಂದು ಇತಿಹಾಸ ಹೇಳುತ್ತದೆ.
ತಾಳಗುಂದ ಶಾಸನ ಹಲ್ಮಿಡಿಗಿಂತಲೂ ಪ್ರಾಚೀನ ಶಾಸನ:ತಾಳಗುಂದ ಒಂದು ಕಾಲದಲ್ಲಿ ಕದಂಬರ ಪ್ರಮುಖ ಕೇಂದ್ರವಾಗಿತ್ತು. ತಾಳಗುಂದದ ಸ್ತಂಭ ಶಾಸನ ಕನ್ನಡ ನಾಡನ್ನು ಆಳಿದ ಪ್ರಥಮ ಕನ್ನಡಿಗ ಅರಸನ ಬಗ್ಗೆ ಮಾಹಿತಿ ನೀಡುತ್ತದೆ. ತಾಳಗುಂದದ ಪ್ರಣವಲಿಂಗೇಶ್ವರ ದೇವಸ್ಥಾನದಲ್ಲಿ ಭಾರತೀಯ ಪುರತಾತ್ವ ಇಲಾಖೆ 2012ರಲ್ಲಿ ಉತ್ಖನನದಿಂದ ಪತ್ತೆಯಾದ ಶಾಸನ, ಕ್ರಿ.ಶ 450 ರಲ್ಲಿ ರಚನೆಯಾದ ಹಲ್ಮಿಡಿ ಶಾಸನಕ್ಕಿಂತಲೂ ಕನ್ನಡದ ಅತ್ಯಂತ ಪ್ರಾಚೀನ ಶಾಸನ ಎಂದು ತಿಳಿದಿ ಬಂದಿದೆ.
ಈ ಕುರಿತು ಸ್ಥಳೀಯರಾದ ನವೀನ್ ಈಟಿವಿ ಭಾರತ ಜೊತೆ ಮಾತನಾಡಿ, "ಕನ್ನಡ ಮೊದಲ ಅರಸ ಮಯೂರ ವರ್ಮ ಜನಿಸಿದ್ದು ತಾಳಗುಂದದಲ್ಲಿ. ಮಯೂರ ವರ್ಮ ತನ್ನ ಪ್ರಾಥಮಿಕ ಶಿಕ್ಷಣ ಮುಗಿಸಿದ್ದು ತಾಳಗುಂದದಲ್ಲಿ. 2012ರಲ್ಲಿ ಭಾರತೀಯ ಪುರತಾತ್ವ ಇಲಾಖೆ ನಡೆಸಿದ ಉತ್ಖನನದಲ್ಲಿ ಹಲ್ಮಿಡಿ ಶಾಸನಕ್ಕಿಂತ ಪುರಾತನ ಶಾಸನ ಲಭ್ಯವಾಗಿದೆ" ಎಂದು ತಿಳಿಸಿದರು.