ಬೆಂಗಳೂರು:ಮಹಿಳೆಯರ ಮೇಲಿನ ನಾನಾ ವಿಧದ ದೌರ್ಜನ್ಯ ವಿರೋಧಿಸಿ ಪ್ರತೀ ವರ್ಷ ನವೆಂಬರ್ 25ರಂದು ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಸಮೀಕ್ಷೆಗಳನ್ವಯ ಪ್ರತಿ 3ರಲ್ಲಿ ಓರ್ವ ಮಹಿಳೆ ತನ್ನ ಜೀವಿತಾವಧಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯಕ್ಕೊಳಗಾಗುತ್ತಾಳೆ.
ಸಮಾಜದಲ್ಲಿ ಮಹಿಳೆಯರ ಸುರಕ್ಷತೆ ಕೇಂದ್ರ ಹಾಗೂ ರಾಜ್ಯಮಟ್ಟದಲ್ಲಿ ಸಾಕಷ್ಟು ಕಾನೂನು, ಯೋಜನೆಗಳಿದ್ದರೂ ಸಹ ಭಾರತದಲ್ಲಿಯೂ ಸಹ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯೇನಿಲ್ಲ. ಕರ್ನಾಟಕದಲ್ಲಿನ ಅಂಕಿ ಅಂಶಗಳನ್ನು ಗಮನಿಸಿದಾಗ ಪ್ರತೀ ವರ್ಷ ರಾಜ್ಯ ಮಹಿಳಾ ಆಯೋಗಕ್ಕೆ ಬರುತ್ತಿರುವ ದೂರುಗಳೇ ಇದಕ್ಕೆ ಕೈಗನ್ನಡಿ.
ವರದಕ್ಷಿಣೆ ಕಿರುಕುಳ, ಉದ್ಯೋಗ ಸ್ಥಳಗಳಲ್ಲಿನ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಪೊಲೀಸ್ ದೌರ್ಜನ್ಯ, ಆಸ್ತಿ ವಿವಾದ ಹೀಗೆ ನಾನಾ ರೀತಿಯಲ್ಲಿ ಕಳೆದ ಐದು ವರ್ಷಗಳಲ್ಲಿ (2024ರ ಜುಲೈ ತಿಂಗಳವರೆಗಿನ ಅಂಕಿ ಅಂಶ) ರಾಜ್ಯಾದ್ಯಂತ 10 ಸಾವಿರಕ್ಕೂ ಅಧಿಕ ದೂರುಗಳು ರಾಜ್ಯ ಮಹಿಳಾ ಆಯೋಗದ ಮೆಟ್ಟಿಲೇರಿವೆ.
ಈ ಪೈಕಿ ದೌರ್ಜನ್ಯದ ವಿರುದ್ಧ ತಮಗೆ ರಕ್ಷಣೆ ಕೋರಿ ಹಾಗೂ ಕೌಟುಂಬಿಕ ದೌರ್ಜನ್ಯ ವಿರೋಧಿಸಿ ದಾಖಲಾದ ಪ್ರಕರಣಗಳೇ ಅಧಿಕ. ಕಳೆದ ಐದು ವರ್ಷಗಳಲ್ಲಿ ರಕ್ಷಣೆ ಕೋರಿ ಒಟ್ಟು 2,895 ಪ್ರಕರಣಗಳು ದಾಖಲಾಗಿದೆ. ಈ ವರ್ಷ 324 (ಜುಲೈವರೆಗೆ) ದೂರುಗಳು ಬಂದಿದ್ದು, ರಕ್ಷಣೆ ಒದಗಿಸುವ ಕೆಲಸ ಮಾಡಲಾಗಿದೆ.
ಬೆಂಗಳೂರಿಗೆ ಅಗ್ರಸ್ಥಾನ:ಮಹಿಳಾ ದೌರ್ಜನ್ಯ ಪ್ರಕರಣಗಳ ವಿಚಾರದಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಬೆಂಗಳೂರು ಅಪಖ್ಯಾತಿಗೆ ಗುರಿಯಾಗಿದೆ. ಕಳೆದ ಐದು ವರ್ಷಗಳಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿ 2,861 ಪ್ರಕರಣಗಳು ಆಯೋಗದಲ್ಲಿ ದಾಖಲಾಗಿವೆ. ಈ ಪೈಕಿ, ರಕ್ಷಣೆ ಕೋರಿ ಹಾಗೂ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ತಲಾ 802 ದೂರುಗಳು, ವರದಕ್ಷಿಣೆ ಕಿರುಕುಳ 191, ಪ್ರೀತಿಯ ಹೆಸರಿನಲ್ಲಿ ಮಾನಸಿಕ ಮತ್ತು ದೈಹಿಕ ದೌರ್ಜನ್ಯ ನಡೆಸಿದ್ದು ಪ್ರೇಮ ಪ್ರಕರಣಗಳಿಗೆ ಸಂಬಂಧಿಸಿದಂತೆ 55, ಲೈಂಗಿಕ ಕಿರುಕುಳ 24, ಅತ್ಯಾಚಾರ ಪ್ರಕರಣಗಳು 10 ಹಾಗೂ ಅತ್ಯಾಚಾರದಿಂದ ಸಾವಿಗೀಡಾದ ಒಂದು ಪ್ರಕರಣ ದಾಖಲಾಗಿವೆ. ದುರಂತದ ಸಂಗತಿಯೆಂದರೆ, ದೌರ್ಜನ್ಯಕ್ಕೊಳಗಾದವರ ಪೈಕಿ ಶೇ.50ರಷ್ಟು ವಿದ್ಯಾವಂತರೇ ಆಗಿದ್ದಾರೆ.