ಹುಬ್ಬಳ್ಳಿ :ಮಳೆಗಾಲದ ಪ್ರಯುಕ್ತ ವಿಶ್ವವಿಖ್ಯಾತ ಜೋಗ್ ಫಾಲ್ಸ್ ವೀಕ್ಷಣೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಆರಂಭಿಸಲಾದ ವಿಶೇಷ ಬಸ್ಗಳಿಗೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಪ್ರಯಾಣಿಕರ ಬೇಡಿಕೆಯ ಮೇರೆಗೆ ಬಸ್ಗಳ ಸಂಖ್ಯೆ ಹೆಚ್ಚಿಸಲಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ್ ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಮಲೆನಾಡು ವ್ಯಾಪ್ತಿಯ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ನದಿ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ವಿಶ್ವವಿಖ್ಯಾತ ಜೋಗ ಜಲಪಾತ ಮೈದುಂಬಿಕೊಂಡಿದೆ. ಜೊತೆಗೆ ಸುತ್ತಲಿನ ರುದ್ರ ರಮಣೀಯ ನಿಸರ್ಗ ಸೌಂದರ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ. ಮನಸಿಗೆ ಮುದ ನೀಡುವ ದೃಶ್ಯ ವೈಭವ ಸವಿಯಲು ಇದು ಅತ್ಯಂತ ಸೂಕ್ತ ಕಾಲ.
ಕುಟುಂಬ ಸಮೇತ ಹೋಗಿ ಬರಲು ಅನುಕೂಲವಾಗುವಂತೆ ವಾರಂತ್ಯದಲ್ಲಿ ಜುಲೈ 14 ರಿಂದ ಪ್ರತಿ ಭಾನುವಾರ ಒಂದು ಮಲ್ಟಿ ಆಕ್ಸೆಲ್ ವೋಲ್ವೋ ಐರಾವತ ಎಸಿ ಹಾಗೂ ಒಂದು ರಾಜಹಂಸ ವಿಶೇಷ ಬಸ್ನ ವ್ಯವಸ್ಥೆ ಮಾಡಲಾಗಿತ್ತು. ಖಾಸಗಿ, ವೈಯಕ್ತಿಕ ವಾಹನ ಪ್ರಯಾಣಕ್ಕಿಂತ ಹೆಚ್ಚು ಆರಾಮದಾಯಕ ಹಾಗೂ ಮಿತವ್ಯಯಕರವಾಗಿರುವುದರಿಂದ ಮಾಹಿತಿ ಪ್ರಕಟಿಸಿದ 48 ತಾಸುಗಳಲ್ಲಿ ಎರಡೂ ಬಸ್ಗಳು ಭರ್ತಿಯಾಗಿದ್ದು, ಹೆಚ್ಚುವರಿ ಬಸ್ಗಳಿಗಾಗಿ ಸಾರ್ವಜನಿಕರಿಂದ ನಿರಂತರ ಬೇಡಿಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಮಲ್ಟಿ ಆ್ಯಕ್ಸಲ್ ವೋಲ್ವೋ ಎಸಿ ಐರಾವತ ಬಸ್ ಹಾಗೂ ರಾಜಹಂಸ ಬಸ್ನ ವ್ಯವಸ್ಥೆ ಮಾಡಲಾಗಿದೆ. ಈ ಬಸ್ಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ.