ಕಲಬುರಗಿ: ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆದಿಲ್ಲ. ಅದು ಮಾಧ್ಯಮಗಳಲ್ಲಿ ಮಾತ್ರ ನಡೆಯುತ್ತಿದೆ. ಸಚಿವರಾದ ಎಂಬಿ ಪಾಟೀಲ್ ಹಾಗೂ ಶಿವಾನಂದ್ ಪಾಟೀಲರು ಈ ವಿಚಾರದಲ್ಲಿ ಮಾತನಾಡಿದ್ದಾರೆ. ಆದರೆ, ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ. ಯಾರೇ ಮುಖ್ಯಮಂತ್ರಿ ಆದರೂ ಬೆಂಬಲವಿದೆ ಎಂದಷ್ಟೆ ಅವರು ಹೇಳಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯ ಐವಾನ್ ಶಾಹಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದಾರ್ಥ ಟ್ರಸ್ಟ್ಗೆ ಭೂಮಿ ಮಂಜೂರು ಪ್ರಕ್ರಿಯೆ ಎಲ್ಲವೂ ಕಾನೂನುಬದ್ಧವಾಗಿ ನಡೆದಿದೆ. ಈ ಬಗ್ಗೆ ಮೊದಮೊದಲು ಜೋರಾಗಿ ಆರೋಪ ಮಾಡಿದ್ದ ವಿರೋದ ಪಕ್ಷದ ನಾಯಕರು ಈಗ ಮೌನವಾಗಿದ್ದಾರೆ. ಬಿಜೆಪಿ ನಾಯಕರೇ ಶಿಕ್ಷಣ ಸಂಸ್ಥೆ ನಡೆಸಲು ಅನುಮತಿ ಪಡೆದುಕೊಂಡು, ಈಗ ಬಿರಿಯಾನಿ ಹೋಟೆಲ್ ಇಟ್ಟಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ರಾಜ್ಯಪಾಲರಿಗೆ ದೂರು ನೀಡಿದೆ ಎಂದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಕೂಡಲೇ ಕ್ರಮ ಜರುಗಿಸಲು ಆದೇಶ ನೀಡಿದ ರಾಜ್ಯಪಾಲರು, ಬಿಜೆಪಿಗರ ಮೇಲೆ ಏಕೆ ಕ್ರಮಕ್ಕೆ ಅನುಮತಿ ನೀಡುತ್ತಿಲ್ಲ. ಹಾಗೆ ಕುಮಾರಸ್ವಾಮಿ ವಿರುದ್ದದ ದೂರಿನ ಬಗ್ಗೆ ಏಕೆ ಕ್ರಮಕೈಗೊಂಡಿಲ್ಲ ಎಂದು ಅವರು ಪ್ರಶ್ನಿಸಿದ್ದು, ಯಾವ ರಾಜ್ಯದಲ್ಲಿ ಬಿಜೆಪಿ ಬಲಹೀನವಾಗಿದೆಯೋ ಅಲ್ಲಿ ರಾಜ್ಯಪಾಲರ ಅಧಿಕಾರವನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಸಂಪುಟದಲ್ಲಿ ಅಭಿವೃದ್ಧಿ ಚರ್ಚೆ: ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯ ಕುರಿತಂತೆ ಸಮಗ್ರವಾಗಿ ಚರ್ಚೆ ನಡೆಯಲಿದೆ. ಸಾಮಾನ್ಯವಾಗಿ ಸಂಪುಟ ಸಭೆಯಲ್ಲಿ ಇಡೀ ರಾಜ್ಯದ ಅಭಿವೃದ್ಧಿ ಕುರಿತಂತೆ ಚರ್ಚೆಯಾಗುತ್ತದೆ. ಆದರೆ, ಬಹಳ ವರ್ಷಗಳ ನಂತರ ಸಂಪುಟ ಸಭೆ ಕಲಬುರಗಿಯಲ್ಲಿ ನಡೆಯುತ್ತಿರುವ ಕಾರಣ, ಈ ಭಾಗದ ಜನರ ಆಶೋತ್ತರಗಳಿಗೆ ಧ್ವನಿಯಾಗಲಿದೆ ಎಂದು ತಿಳಿಸಿದರು.
ನಿಪುಣ ಕರ್ನಾಟಕ ಯೋಜನೆ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹಾಗೂ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು. ಈಗಾಗಲೇ ಕೌಶಲ್ಯಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಜಂಟಿಯಾಗಿ ನಿಪುಣ ಕರ್ನಾಟಕ ಯೋಜನೆ ರೂಪಿಸಿವೆ. ಈ ಯೋಜನೆಯಡಿ ಯುವಕರಿಗೆ ಉದ್ಯೋಗ ಕಲ್ಪಿಸುವ ಮಹತ್ವಾಕಾಂಕ್ಷೆ ಇದ್ದು, ಮುಂದಿನ ಎರಡು ತಿಂಗಳಲ್ಲಿ ಇದನ್ನು ಜಾರಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಪ್ರತ್ಯೇಕ ಸಚಿವಾಲಯ: 371 (ಜೆ) ವಿಧಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡುವ ಬೇಡಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆ ಬಗ್ಗೆಯೂ ಕೂಡಾ ಚರ್ಚಿಸಲಾಗುವುದು. ಆರ್ಟಿಕಲ್ 371 (ಜೆ) ಅಡಿ 22 ಸಾವಿರ ಇಂಜಿನಿಯರಿಂಗ್ ಹಾಗೂ 2 ಸಾವಿರ ವೈದ್ಯಕೀಯ ಸೀಟು ಹಂಚಿಕೆಯಾಗಿವೆ. ಇದೂ ಕೂಡಾ ಕಟ್ಟುನಿಟ್ಟಿನ ಜಾರಿಯಲ್ಲವೇ? ಪ್ರತ್ಯೇಕ ಸಚಿವಾಲಯದ ಬಗ್ಗೆ ಪ್ರಯತ್ನ ನಡೆಸಲಾಗುವುದು ಎಂದು ಆಶ್ವಾಸನೆ ನೀಡಿದರು.