ಬೆಂಗಳೂರು:ಪ್ರದೀಪ್ ಈಶ್ವರ್ ಅವರ ಕೈಗೆ ಕಬ್ಬಿಣ ಕೊಡಿ' ಎಂದು ಸ್ಪೀಕರ್ ಯು.ಟಿ.ಖಾದರ್ ವಿಧಾನಸಭೆಯಲ್ಲಿ ಹೇಳಿದ ಪ್ರಸಂಗ ನಡೆಯಿತು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್ನ ಶಾಸಕರು ಧರಣಿ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಸದಸ್ಯ ಪ್ರದೀಪ್ ಈಶ್ವರ್ ಬಿಜೆಪಿ ವಿರುದ್ಧ ವಾಕ್ಸಮರಕ್ಕೆ ಇಳಿದರು.
ರಾಜ್ಯದಲ್ಲಿ ಮಳೆಯಿಂದಾಗಿ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿಪಕ್ಷದವರಿಗೆ ಮಾನ ಮರ್ಯಾದೆ ಇಲ್ಲ. ಜನರ ಸಮಸ್ಯೆಗೆ ಸ್ಪಂದಿಸದೇ ಇಲ್ಲಿ ರಾಜಕೀಯ ಚರ್ಚೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಮತ್ತೆ ರಾಜಕೀಯ ಚರ್ಚೆ ಆಗುತ್ತಿದ್ದಂತೆ ಸ್ಪೀಕರ್ ಅವರು ಅದನ್ನು ತಡೆಯಲು ಯತ್ನಿಸಿದರು. ಆದರೆ, ಪ್ರದೀಪ್ ಈಶ್ವರ್ ಮಾತು ಮುಂದುವರಿಸಿ ಈ ಹಿಂದೆ ಭೋವಿ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ಹಗರಣಗಳ ನಡೆದಿವೆ. ಅವುಗಳನ್ನು ಸಿಬಿಐಗೆ ಕೊಡುವಂತೆ ಕೇಳುತ್ತೀರಾ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ಶಾಸಕರು, ಬಂಡಲ್ ಬಂಡಲ್ ಪ್ರದೀಪ್ ಈಶ್ವರ್ ಬಂಡಲ್ ಎಂದು ಮೂದಲಿಕೆಯ ಘೋಷಣೆಗಳನ್ನು ಕೂಗಿದರು.
ಪರಿಸ್ಥಿತಿ ಕೈ ತಪ್ಪುತ್ತಿರುವ ಮುನ್ಸೂಚನೆ ಅರಿತ ಸ್ಪೀಕರ್, ಶರತ್ ಬಚ್ಚೇಗೌಡ ಅವರಿಗೆ ಅವಕಾಶ ನೀಡಿದರು. ಆದರೆ ಪ್ರದೀಪ್ ತಮ್ಮ ಮಾತನ್ನು ನಿಲ್ಲಿಸದೇ ಘೋಷಣೆ ಕೂಗುತ್ತಲೇ ಇದ್ದರು. ಸಭಾಧ್ಯಕ್ಷರು ಎಷ್ಟು ಬಾರಿ ಸಮಾಧಾನ ಪಡಿಸಿದರು, ಪ್ರಯೋಜನವಾಗಲಿಲ್ಲ ಕೊನೆಗೆ ಕಾಂಗ್ರೆಸ್ಸಿನ ಶಾಸಕರು, ಪ್ರದೀಪ್ ಈಶ್ವರ್ ಬಳಿ ಹೋಗಿ ಸಮಾಧಾನ ಮಾಡಿ ಕೂರಿಸಿದರು. ಆಗ ಆರ್ ಅಶೋಕ್ ಅವರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಆಡಳಿತ ಪಕ್ಷದ ಶಾಸಕರಿಗೆ ಮಾತನಾಡಲು ಅವರದೇ ಪಕ್ಷದ ಶಾಸಕರು ಅವಕಾಶ ನೀಡುತ್ತಿಲ್ಲ. ಈ ಸದನಕ್ಕೆ ಬೆಲೆ ಇಲ್ಲವೇ, ಮರ್ಯಾದೆ ಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.