ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಆರು ತಿಂಗಳೊಳಗೆ ಶಿಶುವೊಂದು ಜನಿಸಿದ್ದು, ಸ್ಪರ್ಶ ಆಸ್ಪತ್ರೆಯ ಡಾ. ಮಾರ್ತಂಡಪ್ಪ ಹಾಗೂ ಡಾ. ಸೀಮಾ ನೇತೃತ್ವದ ವೈದ್ಯರ ತಂಡ, ನಿರಂತರ ಪ್ರಯತ್ನದಿಂದ ನವಜಾತ ಶಿಶುವನ್ನು ಪೋಷಕರ ಮಡಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಮಾನ್ಯವಾಗಿ 40 ವಾರಗಳಲ್ಲಿ ಮಗು ಜನನವಾಗಬೇಕು. ಆದ್ರೆ ನಗರದ ಸಾಗರ ಗಣಾಚಾರಿ ಅವರ ಪತ್ನಿ ಸಂಜನಾ ಮಗು ಹುಟ್ಟುವ ಮುನ್ನ ಆರೋಗ್ಯ ಸಮಸ್ಯೆ ಅನುಭವಿಸುತ್ತಿದ್ದರು. ಗರ್ಭ ಚೀಲ ತೆರೆದುಕೊಂಡಿತ್ತು. ನೀರು ಸಹ ಕಡಿಮೆ ಆಗಿತ್ತು. ತಾಯಿ ಗರ್ಭದಲ್ಲಿ ಮಗು ಉಳಿದುಕೊಳ್ಳುವ ಸಾಧ್ಯತೆ ಇರಲಿಲ್ಲ. ಈ ವಿಷಯ ತಿಳಿದ ಸ್ಪರ್ಶ ಆಸ್ಪತ್ರೆಗೆ ವೈದ್ಯರ ತಂಡ ಮೊದಲು ನಾಲ್ಕು ದಿನಗಳ ಕಾಲ ಗರ್ಭದಲ್ಲಿ ಮಗುವಿನ ಆರೈಕೆ ಮಾಡಿದ ನಂತರ ಹೆರಿಗೆ ಮಾಡಿಸಿದೆ. ಆರು ತಿಂಗಳು ಪೂರೈಸಿ ಹೆರಿಗೆಯಾದ ಮಗುವಿಗೆ ತಾಯಿ ಗರ್ಭದಲ್ಲಿ ಸಿಗಬೇಕಾದ ಎಲ್ಲ ಆರೈಕೆಯನ್ನು ಇದೀಗ ತುರ್ತು ನಿಗಾ ಘಟಕ(ಐಸಿಯು)ದಲ್ಲಿ ಕೊಡಲಾಗಿದೆ.
ಡಾ. ಮಾರ್ತಂಡಪ್ಪ ಹಾಗೂ ಡಾ. ಸೀಮಾ ಭೈರಿ ನೇತೃತ್ವದ ವೈದ್ಯರ ತಂಡ ಎರಡು ತಿಂಗಳ ಕಾಲ ಎನ್ಐಸಿಯುನಲ್ಲಿ ಆರೈಕೆ ಮಾಡಿ ಮಗು ಹಾಲು ಕುಡಿಯುವ ಹಂತಕ್ಕೆ ಬಂದ ಮೇಲೆ ಪೋಷಕರ ಮಡಲಿಗೆ ಒಪ್ಪಿಸಿದ್ದಾರೆ.
ಈ ಕುರಿತಂತೆ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ನವಜಾತ ಶಿಶು ತಜ್ಞ ವೈದ್ಯ ಡಾ. ಮಾರ್ತಾಂಡಪ್ಪ, ''ಇದೊಂದು ಕ್ಲಿಷ್ಟಕರವಾದ ಪ್ರಕರಣ. ಆರು ತಿಂಗಳಿಗೆ ಆರು ದಿನ ಕಡಿಮೆ ಇರುವಾಗಲೇ ಮಗು ಜನನವಾಗಿದೆ. ಹುಟ್ಟಿದಾಗಲೇ ಶಿಶು ಕೇವಲ 840 ಗ್ರಾಂ ತೂಕ ಹೊಂದಿತ್ತು. ಹೀಗಾಗಿ ನಿರಂತರವಾಗಿ 20 ದಿನ ಐಸಿಯುನಲ್ಲಿ ಇಡಲಾಗಿತ್ತು. ಅದಾದ ನಂತರ 30 ದಿನಗಳ ಹೋರಾಟದ ಬಳಿಕ ಬಂದಿರುವ ಮಗುವಾಗಿದೆ. ಈ ಮಗುವನ್ನು ನೀರಿನ ಮೇಲಿನ ಗುಳ್ಳೆಯಂತೆ ನೋಡಿಕೊಳ್ಳಬೇಕಿತ್ತು. ಗುಳ್ಳೆ ಒಡೆಯಲು ಬಿಡದಂತೆ ನಮ್ಮ ನರ್ಸಿಂಗ್ ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ. ಸಾಮಾನ್ಯವಾಗಿ ಮಗು 40 ವಾರಗಳ ನಂತರ ಜನಿಸುತ್ತದೆ. ಆದ್ರೆ ಇದನ್ನು ಎಲ್ಲಾ ವೈದ್ಯರು ಮಾಡುತ್ತಾರೆ. 28 ವಾರಗಳು ಅಂದ್ರೆ 7 ರಿಂದ ಏಳೂವರೆ ತಿಂಗಳ ಪೂರ್ವದಲ್ಲಿ ಮಕ್ಕಳು ಹುಟ್ಟಿದ್ದನ್ನು ನಾವು ಹೆಚ್ಚು ವೈದ್ಯಕೀಯ ಉಪಚಾರ ಮಾಡಿದ್ದೇವೆ. ಏಳು ತಿಂಗಳ ಆಸುಪಾಸಿನಲ್ಲಿ ಜನಿಸಿದ ಶೇ.80-85ರಷ್ಟು ಮಕ್ಕಳು ಹುಬ್ಬಳ್ಳಿಯಲ್ಲಿ ಬದುಕುಳಿದಿವೆ. ಆದ್ರೆ ಇದೊಂದು ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಪ್ರಯತ್ನವಾಗಿದೆ. ಈ ಬಗ್ಗೆ ಪೋಷಕರಿಗೆ ಇದು ಅಸಾಧ್ಯ ಅಂತ ಮನವರಿಕೆ ಮಾಡಿದಾಗಲೂ ಅವರ ಒತ್ತಾಯಕ್ಕೆ ಮಣಿದು ಮಾಡಲಾಗಿದೆ. ಆದ್ರೆ ಇದರಲ್ಲಿ ನಾವು ಯಶಸ್ವಿಯಾಗಿದ್ದೇವೆ'' ಎಂದು ಹೇಳಿದರು.