ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಬಿತ್ತನೆ ಕಳೆದ ವರ್ಷಕ್ಕಿಂತ ಹೆಚ್ಚಳ: ಕೆಲವು ಬೆಳೆಗಳಿಗೆ ನೀರಿನ ಕೊರತೆ - Karnataka Sowing Rate - KARNATAKA SOWING RATE

ರಾಜ್ಯದಲ್ಲಿ ಬಿತ್ತನೆ ಪ್ರಮಾಣ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಆದರೆ, ಮಳೆ ಕೊರತೆಯಿಂದ ಕೆಲವೆಡೆ ಬಿತ್ತನೆ ಮಾಡಿರುವ ಬೆಳೆ ಒಣಗುತ್ತಿದೆ.

SOWING RATE
ಬಿತ್ತನೆ ಕಾರ್ಯ (ETV Bharat)

By ETV Bharat Karnataka Team

Published : Jul 3, 2024, 8:19 AM IST

ಬೆಂಗಳೂರು:ರಾಜ್ಯದಲ್ಲಿ ಪ್ರಸ್ತುತ ಸಾಲಿನಲ್ಲಿ 82.48 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಈಗಾಗಲೇ 33.06 ಲಕ್ಷ ಹೆಕ್ಟೇರ್‌ ಅಥವಾ ಶೇ.40ರಷ್ಟು ಬಿತ್ತನೆ ಪೂರ್ಣಗೊಂಡಿದೆ. ರಾಜ್ಯದ ಕೆಲವೆಡೆ ಮುಂಗಾರು ದುರ್ಬಲಗೊಂಡಿದ್ದು, ಇನ್ನು ಕೆಲವೆಡೆ ಪ್ರಬಲವಾಗಿದೆ.

ಉತ್ತರ ಕನ್ನಡ, ಹಾವೇರಿ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದ ಮಳೆಯಾಗದೇ ಈಗಾಗಲೇ ಬಿತ್ತನೆ ಮಾಡಿರುವ ಕೆಲವು ಬೆಳೆಗಳಿಗೆ ನೀರಿನ ಕೊರತೆ ಎದುರಾಗಿದೆ. ಕೃಷಿ ಇಲಾಖೆಯ ಪ್ರಕಾರ, ಈ ಸಲ ವಾಡಿಕೆಗಿಂತ ಹೆಚ್ಚು ಬಿತ್ತನೆಯಾಗಿದೆ.

ಬಿತ್ತನೆ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಆದರೆ, ಮಳೆ ಕೊರತೆಯಿಂದ ಕೆಲವೆಡೆ ಬಿತ್ತಿದ ಬೆಳೆ ಒಣಗುತ್ತಿದೆ. ಕಳೆದ ಮುಂಗಾರಿನಲ್ಲಿ ಈ ವೇಳೆಗೆ ಶೇ.8.37ರಷ್ಟು ಬಿತ್ತನೆ ನಡೆದಿತ್ತು. ರಾಗಿ ಬಿತ್ತನೆ ಮಾಡುವ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿನ ಕೆಲವೆಡೆ ಬಿತ್ತನೆ ಆರಂಭವಾಗಿಲ್ಲ.

ನೈಋುತ್ಯ ಮುಂಗಾರು ಅವಧಿಯಲ್ಲಿ ಜೂನ್‌ 1ರಿಂದ 23ರವರೆಗೆ ವಾಡಿಕೆಯ ಪ್ರಕಾರ, 137 ಮಿ.ಮೀ. ಮಳೆ ಆಗುತ್ತಿತ್ತು. ಆದರೆ, ಈ ಬಾರಿ 145 ಮಿ.ಮೀ. ಮಳೆಯಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ ಮಳೆ ಹೆಚ್ಚಾಗಿದೆ. ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕ್ರಮವಾಗಿ ವಾಡಿಕೆಗಿಂತ ಶೇ.43 ಮತ್ತು 31ರಷ್ಟು ಮಳೆ ಕೊರತೆಯಾಗಿದೆ.

ರಾಜ್ಯದಲ್ಲಿ ವಾಡಿಕೆಯಂತೆ, ಜೂನ್ 1ರಿಂದ 23ರವರೆಗೆ 14 ಜಿಲ್ಲೆಗಳ 101 ತಾಲೂಕುಗಳಲ್ಲಿ ಅತಿ ಹೆಚ್ಚು ಮಳೆಯಾದರೆ, 7 ಜಿಲ್ಲೆಗಳ 38 ತಾಲೂಕುಗಳಲ್ಲಿ ಹೆಚ್ಚು ಮಳೆಯಾಗಿದೆ. 3 ಜಿಲ್ಲೆ, 47 ತಾಲೂಕುಗಳಲ್ಲಿ ವಾಡಿಕೆಯಷ್ಟು ಮಳೆಯಾಗಿದೆ. 7 ಜಿಲ್ಲೆ 45 ತಾಲೂಕುಗಳಲ್ಲಿ ಮಳೆಯ ಕೊರತೆ ಉಂಟಾಗಿದೆ.

ಕಡಲೆಕಾಳು, ಕಸುಬೆ, ಅಗಸೆ ಬೀಜ, ಮಟಕಿ ಬಿತ್ತನೆ ಶೂನ್ಯವಾಗಿದೆ. ಹುರುಳಿ ಶೇ.1ರಷ್ಟು ಬಿತ್ತನೆಯಾಗಿದೆ. ಒಟ್ಟಾರೆ ಏಕದಳ ಧಾನ್ಯಗಳ ಬಿತ್ತನೆ 36.33 ಲಕ್ಷ ಹೆಕ್ಟೇರ್‌ನ ಗುರಿಯಿದ್ದರೆ, ಈಗಾಗಲೇ 10.68 ಲಕ್ಷ ಹೆಕ್ಟೇರ್‌ ಬಿತ್ತನೆಯಾಗಿದೆ. ಅದೇ ರೀತಿ ದ್ವಿದಳ ಧಾನ್ಯಗಳ 21.19 ಲಕ್ಷ ಹೆಕ್ಟೇರ್‌ ಗುರಿ ಪೈಕಿ 10.38 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ.

ರಾಜ್ಯದಲ್ಲಿ ಈ ಬಾರಿ ಕೃಷಿ ಬಿತ್ತನೆಯಲ್ಲಿ ಉತ್ತಮ ಪ್ರಗತಿ ಕಂಡಿದೆ. 82.48 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದ್ದು, ಈಗಾಗಲೇ 33.06 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಈಗಾಗಲೇ ಶೇ.40ರಷ್ಟು ಬಿತ್ತನೆಯಾಗಿದೆ. ಬಾಗಲಕೋಟೆ, ಗದಗ, ಹಾವೇರಿ ಮತ್ತಿತರ ಜಿಲ್ಲೆಗಳಲ್ಲಿ ನಿರೀಕ್ಷೆಗೂ ಮೀರಿದ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಗಿ ಮತ್ತು ಜೋಳದ ಉತ್ಪಾದನೆಗೆ ವಿಶೇಷ ಪ್ರೋತ್ಸಾಹಧನ ಕಾರ್ಯಕ್ರಮ 2014-15ರಿಂದಲೂ ಅನುಷ್ಠಾನಗೊಳಿಸಲಾಗುತ್ತಿದೆ.

ಯೋಜನೆಯ ಉದ್ದೇಶ: ರಾಗಿ ಮತ್ತು ಜೋಳ ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು, ಹೆಚ್ಚಿನ ಪೌಷ್ಠಿಕಾಂಶವುಳ್ಳ ಆಹಾರ ಧಾನ್ಯಗಳನ್ನು ಬೆಳೆಯಲು ರೈತರನ್ನು ಪ್ರೇರೇಪಿಸುವುದು ಮತ್ತು ರೈತರ ಆರ್ಥಿಕ ಮಟ್ಟವನ್ನು ಸುಧಾರಿಸುವುದು ಯೋಜನೆಯ ಉದ್ದೇಶ. ರಾಜ್ಯದಲ್ಲಿ ರಾಗಿ ಮತ್ತು ಜೋಳದ ಉತ್ಪಾದನೆಯನ್ನು ಹೆಚ್ಚಿಸುವುದರ ಮುಖಾಂತರ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಅಕ್ಕಿಯ ಜೊತೆಗೆ ಪೌಷ್ಠಿಕ ಆಹಾರ ಧಾನ್ಯಗಳಾದ ರಾಗಿ ಮತ್ತು ಜೋಳವನ್ನೂ ಸಹ ವಿತರಿಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ.

"ಬೆಲೆ ಹೆಚ್ಚಳಕ್ಕೆ ಕೆಲವು ಕಾರಣಗಳಿವೆ. 2023-24ನೇ ಸಾಲಿನಲ್ಲಿ ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಬರ ನಮ್ಮನ್ನು ಕಾಡಿದೆ. 46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ‌ ಬೆಳೆ ನಷ್ಟವಾದರೂ ಪ್ರಸ್ತುತ ಸಾಲಿಗೆ ಬಿತ್ತನೆ ಬೀಜಕ್ಕೆ ಕೊರತೆಯಾಗದ ರೀತಿ ಮುಂಜಾಗ್ರತೆ ವಹಿಸಿ ಈಗಾಗಲೇ ಪೂರೈಕೆ ಮಾಡಲಾಗಿದೆ" ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಇದನ್ನೂ ಓದಿ:ರೈತರ ಗಮನಕ್ಕೆ: ಈ ದಿನದೊಳಗೆ ನಿಮ್ಮ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಿ - Information For Farmers

ABOUT THE AUTHOR

...view details