ಕೊಪ್ಪಳ:ದಕ್ಷಿಣ ಭಾರತದ ಕುಂಭ ಮೇಳ ಎಂದೇ ಹೆಸರುವಾಸಿಯಾಗಿರುವ ಕೊಪ್ಪಳದ ಗವಿಸಿದ್ದೇಶ್ವರ ಮಹಾ ರಥೋತ್ಸವ ಜ.15 ರಂದು ಸಂಜೆ 5:30 ಗಂಟೆಗೆ ಜರುಗಲಿದ್ದು, ಇಡೀ ಕೊಪ್ಪಳ ನಗರ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ರಥೋತ್ಸವ ವರ್ಷದಿಂದ ವರ್ಷಕ್ಕೆ ವಿಶೇಷಗಳನ್ನೇ ಹೊತ್ತು ತರುವ ಮೂಲಕ ಹಾಗೂ ಅನ್ನ, ಅಕ್ಷರ, ಅಧ್ಯಾತ್ಮ ಎಂಬ ತ್ರಿವಿಧ ದಾಸೋಹಕ್ಕೆ ಆದ್ಯತೆ ನೀಡುವ ಮೂಲಕ ಜಗದ್ವಿಖ್ಯಾತಿ ಪಡೆಯುತ್ತಿದೆ.
ಸಾಮಾಜಿಕ ಕಳಕಳಿ: ಜಾತ್ರೆ ಎಂದರೆ ಕೇವಲ ಭಕ್ತಿಗೆ ಸೀಮಿತವಾಗಿರದೇ ಜನರಲ್ಲಿ ಅನ್ನ ದಾಸೋಹ, ಅಕ್ಷರ ದಾಸೋಹ, ಪರಿಸರ ಕಾಳಜಿ, ರಕ್ತದಾನ, ಅಂಗಾಂಗ ದಾನ, ಜಲದೀಕ್ಷೆ, ಸಕಲ ಚೇತನ, ಹೀಗೆ.. ಅದ್ಭುತ ಸಾಮಾಜಿಕ ಕಾಳಜಿ ಮತ್ತು ಉದ್ದೇಶಗಳ ಅಭಿಯಾನಗಳಿಂದ ವರ್ಷದಿಂದ ವರ್ಷಕ್ಕೆ ಸತ್ಕಾರ್ಯಗಳನ್ನು ಮಾಡುತ್ತಿರುವ ಗವಿಮಠದ ಜಾತ್ರೆಯ ಮತ್ತೊಂದು ವಿಶೇಷವಾಗಿದೆ.
ಭಕ್ಷ ಬೋಜನದ ಜಾತ್ರೆ: ಸತತ 15 ದಿನಗಳ ಕಾಲ ಮಹಾ ದಾಸೋಹ ನಡೆಸಿಕೊಂಡು ಬರುತ್ತಿರುವುದು ಜಾತ್ರೆಯ ಮಗದೊಂದು ವಿಶೇಷ. ಈ ವರ್ಷದ ಜಾತ್ರೆಯಲ್ಲಿ ಮೊದಲ ದಿನದ ಪ್ರಸಾದದಲ್ಲಿ ಭಕ್ತರು ಬೆಲ್ಲದ ಜಿಲೇಬಿ ಸವಿ ಸವಿದರು. ಈ ಮಹಾ ದಾಸೋಹಕ್ಕೆ ತಿಂಗಳ ಹಿಂದಿನಿಂದಲೇ ಸುತ್ತಮುತ್ತಲ ಗ್ರಾಮದ ಜನರು ಹೋಳಿಗೆ, ತುಪ್ಪ, ರೊಟ್ಟಿ, ಚಟ್ನಿ, ಕಾಯಿಪಲ್ಯಗಳನ್ನು ತಂದು ಶ್ರೀಮಠಕ್ಕೆ ಅರ್ಪಿಸುವುದು ವಾಡಿಕೆ.