ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ನಿರ್ಮಿಸಿರುವ ದಕ್ಷಿಣ ಭಾರತದ ಮೊದಲ ರೈಲ್ ಕಮ್ ರಸ್ತೆ ಸಂಚಾರದ ಡಬ್ಬಲ್ ಡೆಕ್ಕರ್ ರಸ್ತೆಯನ್ನು ಪ್ರಾಯೋಗಿಕವಾಗಿ ಇಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತಿದೆ ಎಂದು ಹಿಂದಿನ ಬಿಬಿಎಂಪಿ ಮುಖ್ಯ ಅಭಿಯಂತರ ಹಾಗೂ ಉಪ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರ ಕೆ.ಟಿ.ನಾಗರಾಜ್ ತಿಳಿಸಿದ್ದಾರೆ.
ಮಾರೇನಹಳ್ಳಿಯಿಂದ ಸಿಲ್ಕ್ ಬೋರ್ಡ್ವರೆಗೂ ತೀವ್ರ ಸಂಚಾರ ದಟ್ಟಣೆಗೆ ಪರಿಹಾರ ಹುಡುಕಲು ಸತತ ಪ್ರಯತ್ನಗಳು ನಿರಂತರವಾಗಿ ನಡೆದಿದೆ. ಇವತ್ತು 2 ಲೆವೆಲ್ ಫ್ಲೈ ಓವರ್ ಪ್ರಾಯೋಗಿಕ ಸಂಚಾರಕ್ಕೆ ಮುಕ್ತಗೊಳ್ಳುತ್ತಿದೆ. ಇದರಿಂದಾಗಿ ಒಂದು ರಸ್ತೆ ಮೆಟ್ರೋ ಕಾರ್ಯಾಚರಣೆಗೆ ಮತ್ತೊಂದು ರಸ್ತೆ ಇತರೆ ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿದೆ. ರಾಮಲಿಂಗಾರೆಡ್ಡಿಯವರು ರಿಂಗ್ ರೋಡ್ ಮತ್ತು ಸಿಲ್ಕ್ ಬೋರ್ಡ್ ಕಡೆ ಪರಿವೀಕ್ಷಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಯಾವ ರೀತಿ ಜನಸಂದಣಿಯನ್ನು ಕಡಿಮೆ ಮಾಡಬೇಕು ಎಂದು ಸಮಾಲೋಚನೆ ನಡೆಸುತ್ತಿದ್ಧಾಗ ಗಮನಕ್ಕೆ ಬಂದ ಯೋಜನೆ 2 ಲೇಯರ್ ಫ್ಲೈ ಓವರ್. ಅದಾಗಲೇ ಗಡ್ಕರಿ ಅವರು ಕೇಂದ್ರ ಸಚಿವರ ನಾಗಪುರ ಕ್ಷೇತ್ರದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದರು.
ಇದನ್ನು ಮನಗಂಡ ಸಚಿವರು ಕೂಡಲೇ ಮೆಟ್ರೋ ಎಂಡಿ ಆಗಿದ್ದ ಪ್ರದೀಪ್ ಸಿಂಗ್ ಕರೋಲ ಅವರೊಂದಿಗೆ ಮಾತನಾಡಿ, ಒಂದು ಕಡೆ ಮೆಟ್ರೋ ಕಾರ್ಯಾಚರಣೆ, ಇನ್ನೊಂದೆಡೆ ವಾಹನಗಳ ಕಾರ್ಯಚರಣೆಗೆ ಅನುವಾಗುವಂತೆ, ಮಲ್ಟಿಲೆವೆಲ್ ಫ್ಲೈ ಓವರ್ ಮಾಡೋಣ. ಇದರಿಂದ ಭೂಸ್ವಾಧೀನದ ಪ್ರಮಾಣವೂ ಕೂಡ ಕಡಿಮೆ ಆಗುತ್ತದೆ. ಅದಕ್ಕೆ ತಗಲುವ ವೆಚ್ಚ ಕೂಡ ಗಣನೀಯವಾಗಿ ಇಳಿಕೆಯಾಗುತ್ತದೆ ಎಂದು ತಿಳಿಸಿದರು.