ಮೈಸೂರು: "ಇಡಿಗೆ ಮುಡಾ ಅಕ್ರಮಗಳ ಕುರಿತು ಐನೂರು ಪುಟದ ದಾಖಲೆಯನ್ನು ನೀಡಿದ್ದೇನೆ. ಅವರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮಾಡುತ್ತಾರೆ" ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದರು.
ಲೋಕಾಯುಕ್ತ ಕಚೇರಿಯ ಬಳಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಿನ್ನೆ ಬೆಂಗಳೂರಿನಲ್ಲಿ ಇಡಿ ತನಿಖೆಗೆ ಹಾಜರಾಗಿದ್ದೆ. ತನಿಖೆ ಸಂದರ್ಭದಲ್ಲಿ ಸುಮಾರು ಐನೂರು ಪುಟಗಳಷ್ಟು ದಾಖಲೆಗಳನ್ನು ಇಡಿಗೆ ನೀಡಿದ್ದೇನೆ. ನಿನ್ನೆ ಇಡಿಯವರು ತನಿಖಾ ಸಂದರ್ಭದಲ್ಲಿ ನನ್ನ ಕುಟುಂಬದ ಹಿನ್ನೆಲೆಯ ಬಗ್ಗೆ, ಮುಡಾದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಮಾಹಿತಿ ಪಡೆದಿದ್ದು, ಎಫ್ಐಆರ್ ದಾಖಲಿಸಿ ತನಿಖೆ ನಡೆಸುವುದಾಗಿ ಹೇಳಿದ್ದಾರೆ" ಎಂದು ತಿಳಿಸಿದರು.
ಇಡಿಯವರು ಎಫ್ಐಆರ್ ಅನ್ನು ಯಾರಿಗೂ ನೀಡುವುದಿಲ್ಲ. ಇಡಿ ತನಿಖೆಗೆ ಅಕ್ರಮ ನಡೆದಿರುವ ಎಲ್ಲ ದಾಖಲೆಗಳನ್ನು ನೀಡಿದ್ದೇನೆ. ಈ ದಾಖಲೆಗಳ ಜತೆಗೆ ಅಕ್ರಮ ಹಣ ವ್ಯವಹಾರ ನಡೆದಿರುವ ಸಂಬಂಧ ಅದಕ್ಕೆ ಪೂರಕ ದಾಖಲೆಗಳನ್ನು ಸಹ ನೀಡಿದ್ದೇನೆ. ಸೆಟ್ಲ್ಮೆಂಟ್ ಡೀಡ್ಗಳ ರೂಪದಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ವರ್ಗಾವಣೆ ಮಾಡಿ, ಅದಕ್ಕೆ ಬದಲಾಗಿ ನಿವೇಶನ ರೂಪದಲ್ಲಿ ಪಡೆದಿದ್ದಾರೆ. ಇದರಲ್ಲಿ ಹಲವಾರು ಪ್ರಭಾವಿಗಳು ಭಾಗಿ ಆಗಿರುವ ಬಗ್ಗೆ ಇಡಿಗೆ ದಾಖಲೆಗಳನ್ನು ನೀಡಿದ್ದೇನೆ. ಬದಲಿ ನಿವೇಶನದ ರೂಪದಲ್ಲಿ ಅಕ್ರಮ ವ್ಯವಹಾರ ನಡೆದಿರುವ ಬಗ್ಗೆ ಇಡಿಗೆ ಮಾಹಿತಿ ನೀಡಿದ್ದೇನೆ" ಎಂದರು.