ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಅಕ್ರಮ ಪ್ರಕರಣ ಸಂಬಂಧ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ಮೈಸೂರು ಲೋಕಾಯುಕ್ತದ ಹಿಂದಿನ ಎಸ್ಪಿ ಸುಜೀತ್ ಅವರ ವಿರುದ್ಧ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.
ಭಾನುವಾರ ಇಮೇಲ್ ಮೂಲಕ ಡಿಜಿ ಮತ್ತು ಐಜಿಪಿಯವರಿಗೆ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ, ಇಂದು ಖುದ್ದು ಡಿಜಿ ಮತ್ತು ಐಜಿಪಿಯವರನ್ನು ಭೇಟಿಯಾಗಿ ದೂರು ಸಲ್ಲಿಕೆ ಮಾಡಿದ್ದಾರೆ.
ದೂರಿನಲ್ಲಿ ಏನಿದೆ?:''ಲೋಕಾಯುಕ್ತರು ನೀಡಿದ್ದ ಸರ್ಚ್ ವಾರೆಂಟ್ ಆಧರಿಸಿ, ಲೋಕಾಯುಕ್ತದ ಹಿಂದಿನ ಎಸ್ಪಿ ಸುಜೀತ್ ನೇತೃತ್ವದಲ್ಲಿ ಜುಲೈ 27ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮೇಲೆ ದಾಳಿ ನಡೆದಿತ್ತು. ಆದರೆ ಆ ಸಂದರ್ಭದಲ್ಲಿ ಸೂಕ್ತ ದಾಖಲೆಗಳನ್ನು ವಶಪಡಿಸಿಕೊಂಡಿಲ್ಲ. ಹಾಗೂ ವಶಪಡಿಸಿಕೊಂಡಿದ್ದ ಕೆಲ ಕಡತಗಳ ಕುರಿತು ಸಚಿವ ಭೈರತಿ ಸುರೇಶ್ ಅವರಿಗೆ ಮಾಹಿತಿ ನೀಡಿದ್ದಾರೆ. ಸಚಿವ ಭೈರತಿ ಸುರೇಶ್ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳಿ, ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ'' ಎಂದು ದೂರಿನಲ್ಲಿ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ತಮ್ಮ ದೂರಿನಲ್ಲಿ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಮಸಿ ಬಳಿಯಲು ಯತ್ನಿಸುತ್ತಿದ್ದಾರೆ, ಆ ಪ್ರಯತ್ನಗಳು ಹೇಗೆ ಯಶಸ್ವಿ ಆಗುತ್ತವೆ ನಾನೂ ನೋಡ್ತೀನಿ : ಸಿಎಂ ಸವಾಲು - CM Siddaramaiah