ಮೈಸೂರು: ಎಸ್ಐಟಿ ಅನ್ನುವುದು ಸಿದ್ದರಾಮಯ್ಯ, ಶಿವಕುಮಾರ್ ತನಿಖಾ ಸಂಸ್ಥೆ ಇದ್ದಂತೆ. ಇವರು ಎಸ್ಐಟಿ ರಚನೆ ಮಾಡುವುದು ತನಿಖೆ ನಡೆಸಲು ಅಲ್ಲ, ಗುಲಾಮಗಿರಿ ಮಾಡಲು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ. ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುನಿರತ್ನ ಪ್ರಕರಣದಲ್ಲಿ ಎಸ್ಐಟಿ ರಚನೆ ಮಾಡುವ ಪ್ರಸ್ತಾವದ ಬಗ್ಗೆ ಈ ರೀತಿ ಪ್ರತಿಕ್ರಿಯಿಸಿದರು.
ಸಚಿವ ಕೃಷ್ಣಬೈರೇಗೌಡ ನಡೆಸಿದ ಸುದ್ಧಿಗೋಷ್ಠಿ ಕಾಂಗ್ರೆಸ್ ಟೂಲ್ ಕಿಟ್. ಯಾರೋ ಅವ್ರಿಗೆ ಸ್ಕ್ರಿಪ್ಟ್ ಕೂಡ ಸರಿಯಾಗಿ ಬರೆದು ಕೊಟ್ಟಿಲ್ಲ. ಈ ಸುಳ್ಳಿನ ಸಂಚಿನಲ್ಲಿ ಅವರೇ ಸಿಕ್ಕಿ ಬೀಳುತ್ತಾರೆ. ನಾನು ಎಲ್ಲಿಗೂ ಕದ್ದು ಹೋಗಲ್ಲ. ಸುಳ್ಳು ಹೇಳಿಕೊಂಡು ಬೇರೆಯವರ ನೆರವು ತೆಗೆದುಕೊಳ್ಳುವುದಿಲ್ಲ. ನನಗೂ ಆರೋಪ ಮಾಡಿರುವ ಪ್ರಾಪರ್ಟಿಗೂ ಸಂಬಂಧವಿದೆ. ಅದು ನನ್ನ ಹೆಂಡತಿಯ ತಾಯಿಯ ಪ್ರಾಪರ್ಟಿ ಎಂದು ಹೇಳಿದರು.
ಸಚಿವ ಕೃಷ್ಣಬೈರೇಗೌಡ ಯಾರೋ ಬರೆದು ಕೊಟ್ಟಿದ್ದನ್ನು ಇಟ್ಟುಕೊಂಡು ಪ್ರೆಸ್ಮೀಟ್ ಮಾಡಿದ್ದಾರೆ. ಈ ಮಾಹಿತಿ ತೆಗೆಯಲು ಕಳೆದ ಮೂರು ತಿಂಗಳಿನಿಂದ ಒದ್ದಾಡುತ್ತಿದ್ದಾರೆ. ಈ ಪ್ರಕರಣ ಸಂಬಂಧ 2015ರಲ್ಲಿ ಕೇಸ್ ಹಾಕಿದ್ದಾರೆ. ಆಗ ಸಿದ್ದರಾಮಯ್ಯ ಸಿಎಂ ಆಗಿದ್ದರು. ಆಗಲೇ ತನಿಖೆ ಮಾಡುವುದನ್ನು ಬಿಟ್ಟು ಏನು ಮಾಡಿದರು?. ನಾನು ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಶುರು ಮಾಡಿದ್ದು, ಅದಕ್ಕಾಗಿ ನನ್ನನ್ನು ಹೇಗಾದರೂ ಮಾಡಿ ಸಿಲುಕಿಸಲು ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ನನ್ನನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ:ನಾನು ಆ ರೀತಿ ಕೆಲಸ ಮಾಡಿಲ್ಲ. ಸಿದ್ದರಾಮಯ್ಯ ಮುಡಾ ಕೇಸ್ಗೂ ನಮ್ಮ ಕೇಸ್ಗೂ ವ್ಯತ್ಯಾಸವಿದೆ. ನನ್ನನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಕೃಷ್ಣಬೈರೇಗೌಡರ ಕಂದಾಯ ಇಲಾಖೆಯಲ್ಲಿ ಏನೆಲ್ಲಾ ಆಗುತ್ತಿದೆ ಎಂಬುದು ಗೊತ್ತು. ಮುಂದಿನ ದಿನಗಳಲ್ಲಿ ಎಲ್ಲಾ ದಾಖಲೆಗಳು ಹೊರೆಗೆ ಬರುತ್ತವೆ. ನಾನು ಕೃಷ್ಣಬೈರೇಗೌಡರಂತೆ ವಿದೇಶದಲ್ಲಿ ಓದಿಲ್ಲ, ಹರದನಹಳ್ಳಿ ಎಂಬ ಚಿಕ್ಕ ಹಳ್ಳಿಯಲ್ಲಿ ಓದಿದ್ದೇನೆ ಎಂದು ಟಾಂಗ್ ಕೊಟ್ಟರು.