ಹಾಸನ:ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಪ್ರಜ್ವಲ್ ರೇವಣ್ಣ ಅವರ ನಿವಾಸದಲ್ಲಿ ವಿಶೇಷ ತನಿಖಾ ತಂಡ ಸ್ಥಳ ಮಹಜರು ನಡೆಸಿತು. ಕ್ಯೂಆರ್‌ಟಿ ವಾಹನದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಕರೆದುಕೊಂಡು ಹೊಳೆನರಸೀಪುರಕ್ಕೆ ಬಂದಿದ್ದ ಎಸ್ಐಟಿ ಅಧಿಕಾರಿಗಳು, ಪ್ರಜ್ವಲ್ ನಿವಾಸದಲ್ಲಿ ಮಹಜರು ನಡೆಸಿದರು.
ಸತತ ನಾಲ್ಕು ಗಂಟೆ ಮಹಜರು: ಶನಿವಾರ ಮಧ್ಯಾಹ್ನ ಒಂದು ಗಂಟೆಯ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಹಾಸನಕ್ಕೆ ಕರೆತರಲಾಗಿತ್ತು. ಪ್ರಜ್ವಲ್ ನಿವಾಸದಲ್ಲಿ ಎಫ್ಎಸ್ಎಲ್ ತಜ್ಞರ ಸಮ್ಮುಖದಲ್ಲಿ ಸತತ ನಾಲ್ಕು ಗಂಟೆ ಸ್ಥಳ ಮಹಜರು ಪ್ರಕ್ರಿಯೆ ನಡೆಸಲಾಯಿತು. ಮಹಜರು ಪೂರ್ಣವಾದ ಬಳಿಕ ಪ್ರಜ್ವಲ್ ಅವರನ್ನು ಎಸ್ಐಟಿ ಅಧಿಕಾರಿಗಳು ಕರೆದೊಯ್ದರು. ನಾಲ್ಕು ವಾಹನಗಳಲ್ಲಿ ಆಗಮಿಸಿದ್ದ ಎಸ್ಐಟಿ ತಂಡ ಮಹಜನರು ಪೂರ್ಣಗೊಳಿಸಿ ತೆರಳಿತು.
ಮೂರು ಕಡೆ ಸ್ಥಳ ಮಹಜರು: ಹೊಳೆನರಸೀಪುರ ನಿವಾಸ ಮತ್ತು ಹಾಸನದಲ್ಲಿ ಸಂಸದರ ನಿವಾಸಕ್ಕೆ ಪ್ರಜ್ವಲ್ ಅವರನ್ನು ಕರೆದೊಯ್ದು ಎಸ್ಐಟಿ ಅಧಿಕಾರಿಗಳು ಮಹಜರು ನಡೆಸಿದರು. ಬಳಿಕ ಓರ್ವ ಸಂತ್ರಸ್ತೆಯ ಮನೆಗೂ ಭೇಟಿ ನೀಡಿ ಅಲ್ಲಿ ಕೆಲವು ಸಾಕ್ಷಾಧಾರಗಳನ್ನು ಕಲೆಹಾಕಿದ ಅಧಿಕಾರಿಗಳು ಬಳಿಕ ಬೆಂಗಳೂರಿನತ್ತ ತೆರಳಿದರು.