ಹಾಸನ:ಜೆಡಿಎಸ್ಸಂಸದ ಪ್ರಜ್ವಲ್ ರೇವಣ್ಣ ಮೇಲಿನ ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ನಿವಾಸದಲ್ಲಿ ಬುಧವಾರ ವಿಶೇಷ ತನಿಖಾ ತಂಡ(ಎಸ್‌ಐಟಿ) ಸಮಗ್ರ ತಪಾಸಣೆ ನಡೆಸಿತು. ಪ್ರಜ್ವಲ್ ರೇವಣ್ಣ ಮಲಗುವ ಕೊಠಡಿಯಲ್ಲಿನ ಹಾಸಿಗೆ, ದಿಂಬು ಹಾಗೂ ಹೊದಿಕೆ ಸೇರಿದಂತೆ ಇತರೆ ವಸ್ತುಗಳನ್ನು ಎಸ್ಐಟಿ, ಎಫ್ಎಸ್ಎಲ್ ವಶಕ್ಕೆ ಪಡೆದಿವೆ.
ಒಂದೆಡೆ ಮೇ 31ರಂದು ಭಾರತಕ್ಕೆ ಬರುವುದಾಗಿ ಪ್ರಜ್ವಲ್ ರೇವಣ್ಣ ಖಚಿತಪಡಿಸಿದ್ದು, ಇತ್ತ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿರುವ ಎಸ್ಐಟಿ ಮತ್ತು ಎಫ್ಎಸ್ಎಲ್ ತಂಡಗಳು, ಹಾಸನ ನಗರದ ಆರ್.ಸಿ.ರಸ್ತೆಯಲ್ಲಿರುವ ಸಂಸದರ ಮನೆಯಲ್ಲಿ ತೀವ್ರ ಪರಿಶೀಲನೆ ನಡೆಸಿವೆ. ಸತತ 10 ಗಂಟೆಗಳ ಕಾಲ ಎರಡೂ ತಂಡಗಳ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ವಿವಿಧೆಡೆ ಬೆರಳಚ್ಚು ಮಾದರಿಗಳನ್ನು ಸಂಗ್ರಹಿಸಲಾಗಿದೆ.