ಬೆಂಗಳೂರು: ಭಾರತ್ ಅಕ್ಕಿಯನ್ನು ಚುನಾವಣೆಗೋಸ್ಕರವಾಗಿ ಜಾರಿಗೆ ತಂದಿದ್ದರು. ಚುನಾವಣೆ ಮುಗಿದ ತಕ್ಷಣ ಅದನ್ನು ನಿಲ್ಲಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಕೇಂದ್ರ ಸರ್ಕಾರ ಭಾರತ್ ಅಕ್ಕಿಯನ್ನು ಸ್ಥಗಿತಗೊಳಿಸಿರುವ ಸಂಬಂಧ ಪ್ರತಿಕ್ರಿಯಿಸುತ್ತಾ, ಭಾರತ್ ಅಕ್ಕಿಯನ್ನು ಚುನಾವಣೆಗೋಸ್ಕರವಾಗಿ ಜಾರಿಗೆ ತಂದಿದ್ದರು. ನಮ್ಮ ಅನ್ನಭಾಗ್ಯ ಯೋಜನೆಗೂ ಅಕ್ಕಿ ಇಟ್ಟು ಕೊಂಡು ಕೊಡುವುದಿಲ್ಲ ಅಂದರೆ ಹೇಗೆ?. ಅದು ರಾಜಕೀಯ ದುರುದ್ದೇಶದಿಂದ ಮಾಡಿದ್ದಾರೆ. ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿ ಅಂತ ಮಾಡಿದ್ದಾರೆ. ದಾಸ್ತಾನು ಇದ್ದರೂ ಅಕ್ಕಿ ಕೊಡುತ್ತಿಲ್ಲ ಎಂದು ಕಿಡಿ ಕಾರಿದರು.
ಕೇಂದ್ರ ಸರ್ಕಾರ ಬಡವರ ಪರವಾಗಿಲ್ಲ. ದಲಿತರ ಪರವಾಗಿಲ್ಲ. ಎಲ್ಲಾ ಜಾತಿಯವರಲ್ಲಿ ಬಡವರಿದ್ದಾರೆ. ಆದರೆ ಕೇಂದ್ರದವರು ಅಕ್ಕಿ ಕೊಡಲಿಲ್ಲ. ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ನಮಗೆ ಅಕ್ಕಿ ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಾಬು ಜಗಜೀವನ್ ರಾಮ್ ಪ್ರತಿಮೆಗೆ ಪುಷ್ಪ ನಮನ:ಭಾರತದ ಮಾಜಿ ಉಪ ಪ್ರಧಾನಿ ದಿವಂಗತ ಡಾ.ಬಾಬು ಜಗಜೀವನ್‍ರಾಮ್ ಅವರ ಪುಣ್ಯತಿಥಿಯ ಅಂಗವಾಗಿ ವಿಧಾನಸೌಧದ ಪಶ್ಚಿಮದ್ವಾರದಲ್ಲಿರುವ ಅವರ ಪ್ರತಿಮೆಯ ಸ್ಥಳದಲ್ಲಿ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
ಡಾ.ಬಾಬು ಜಗಜೀವನ್‍ರಾಮ್ ಪ್ರತಿಮೆಗೆ ಪುಷ್ಪನಮನ (ETV Bharat) ಈ ಸಂದರ್ಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.
ಬಳಿಕ ಮಾತನಾಡಿ,ಬಾಬು ಜಗಜೀವನ್ ರಾಮ್ ಬಿಟ್ಟು ಹೋದ ದಾರಿಯಲ್ಲಿ ನಡೆದುಕೊಂಡು ಹೋಗುವ ದಿನವಾಗಿದೆ. ಅವರು ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ. ಸ್ವಾತಂತ್ತ್ಯ ಬಂದಾಗ ಆಹಾರ ಮಂತ್ರಿಯಾಗಿದ್ದಾಗ ದೇಶಕ್ಕೆ ಆಹಾರ ಭದ್ರತೆಯನ್ನು ಮಾಡಿ ಕೊಟ್ಟಿದ್ದರು. ದೇಶಕ್ಕೆ ಆಹಾರ ಭದ್ರತೆ ಸಿಕ್ಕಿದ್ದರೆ ಅದಕ್ಕೆ ಅವರು ಕಾರಣರಾಗಿದ್ದಾರೆ. ಅವರೊಬ್ಬ ದಕ್ಷ ಆಡಳಿತಗಾರ. ಕಾರ್ಮಿಕ ಕಾನೂನುಗಳನ್ನು ರಚನೆ ಮಾಡಲು ಕಾರಣಕರ್ತರು ಎಂದು ಸಿಎಂ ಶ್ಲಾಘಿಸಿದರು.
ಕಾರ್ಮಿಕರು, ದಲಿತರರು, ಬಡವರ ಪರವಾಗಿ ಕೆಲಸ ಮಾಡಿದವರು. ಅವರ ದಾರಿಯಲ್ಲಿ ನಡೆಯುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ. ಜು.13ರಂದು ಬಾಬು ಜಗಜೀವನ್ ರಾಮ್ ಭವನ ನಿರ್ಮಾಣವನ್ನು ಉದ್ಘಾಟನೆ ಮಾಡಲಿದ್ದೇವೆ. 100 ಕೋಟಿ ವೆಚ್ಚದಲ್ಲಿ ಭವನ ಕಟ್ಟಿದ್ದೇವೆ ಎಂದರು.
ಪುಷ್ಪಾರ್ಚನೆ ವೇಳೆ ಆಕ್ಷೇಪ:ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುವ ವೇಳೆ ನೆರೆದಿದ್ದ ಕೆಲ ದಲಿತ ನಾಯಕರು ಜೋರು ಧ್ವನಿಯಲ್ಲಿ ಪಿಟಿಸಿಎಲ್ ಕಾಯ್ದೆ ಸಮರ್ಪಕವಾಗಿ ಜಾರಿ ಆಗ್ತಿಲ್ಲ, ಪರಭಾರೆ ಭೂಮಿಯನ್ನು ವಾಪಸ್ ಕೊಡಿಸಿ ಎಂದು ಆಗ್ರಹಿಸಿದ ಘಟನೆ ನಡೆಯಿತು. ಸಿಎಂ ಹೊರಟ ಬಳಿಕ ಸಚಿವರಾದ ಹೆಚ್.ಸಿ.ಮಹದೇವಪ್ಪ, ಕೆ.ಹೆಚ್.ಮುನಿಯಪ್ಪಗೆ ಮುತ್ತಿಗೆ ಹಾಕಿದರು. ಈ ವೇಳೆ ತಳ್ಳಾಟ, ನೂಕಾಟ ಕೆಲ ಕಾಲ ವಾಗ್ವಾದ ನಡೆಯಿತು. ಬಳಿಕ ಕಾರನ್ನೇರಿ ಇಬ್ಬರು ಸಚಿವರು ತೆರಳಿದರು. ಸಚಿವರು ಹೋದ ಬಳಿಕವೂ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಶಿಗ್ಗಾಂವ ಉಪಚುನಾವಣೆ: ಟಿಕೆಟ್ಗಾಗಿ ಕಾಂಗ್ರೆಸ್ನಲ್ಲಿ ತೀವ್ರ ಪೈಪೋಟಿ, ಸಚಿವರ ಸಭೆಯಲ್ಲಿ ಬೆಂಬಲಿಗರ ತಿಕ್ಕಾಟ - Shigaon by election