ಕರ್ನಾಟಕ

karnataka

ಪೊಡವಿಗೊಡೆಯನ ನಾಡಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ವಿಟ್ಲಪಿಂಡಿ ಉತ್ಸವಕ್ಕೆ ಕ್ಷಣಗಣನೆ - SHRIKRISHNA JANMASHTAMI

By ETV Bharat Karnataka Team

Published : Aug 26, 2024, 6:41 PM IST

Updated : Aug 26, 2024, 7:15 PM IST

ಶ್ರೀ ಕೃಷ್ಣ ಮಠದಲ್ಲಿ ಮಾತ್ರವಲ್ಲದೆ ಕೃಷ್ಣನೂರಿನ ಬೀದಿ ಬೀದಿಗಳಲ್ಲೂ ಶ್ರೀ ಕ್ಷಣ ಜನ್ಮಾಷ್ಟಮಿ ಹಬ್ಬದ ಆಚರಣೆ, ತಯಾರಿ ಜೋರಾಗಿದೆ.

SHRIKRISHNA JANMASHTAMI CELEBRATION IN UDUPI SHRI KRISHNA MATH
ಪೊಡವಿಗೊಡೆಯನ ನಾಡಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ (ETV Bharat)

ಉಡುಪಿ:ಪೊಡವಿಗೊಡೆಯನ ನಾಡಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಯ ಸಿದ್ಧತೆ ವೈಭವದಿಂದ ನಡೆಯುತ್ತಿದ್ದು, ಅಷ್ಟಮಿ ವಿಟ್ಲಪಿಂಡಿ ಉತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.

ಪೊಡವಿಗೊಡೆಯನ ನಾಡಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ (ETV Bharat)

ಕೃಷ್ಣನ ನಾಡು ಉಡುಪಿಯಲ್ಲಿ ಅಷ್ಟಮಿಯ ಆಚರಣೆ ಭಿನ್ನವಾಗಿದ್ದು, ಶ್ರೀಕೃಷ್ಣ ದೇವಸ್ಥಾನದಲ್ಲಿ ಜನ್ಮಾಷ್ಟಮಿ ಸಂಭ್ರಮದಿಂದ ‌ನಡೆಯುತ್ತದೆ. ಮಠಕ್ಕೆ ಮುಂಜಾನೆಯಿಂದಲೇ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಬರುತ್ತಿದ್ದಾರೆ. ಹೆಚ್ಚಿನವರು ಜನ್ಮಾಷ್ಟಮಿ ದಿನ ಉಪವಾಸದಿಂದಿದ್ದು, ರಾತ್ರಿ 12 ಗಂಟೆ 7 ನಿಮಿಷಕ್ಕೆ ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರದಾನವಾದ ಬಳಿಕ ಫಲಾಹಾರ ಸೇವನೆ ಮಾಡುತ್ತಾರೆ.

ಹಬ್ಬದ ಆಚರಣೆಗೆ ಕ್ಷಣಗಣನೆ:ಕರಾವಳಿಯಲ್ಲಿ ಅಷ್ಟಮಿಗೆ ಮೂಡೆ/ಕೊಟ್ಟಿಗೆ/ಗುಂಡ ವಿಶೇಷ ತಿನಿಸು. ಈ ಮೂರು ವಿಧಾನಗಳಲ್ಲಿ ಹಲಸಿನ, ಕೇದಗೆ ಹಾಗೂ ಬಾಳೆ ಎಲೆಗಳನ್ನು ಕಟ್ಟಿ ಉದ್ದಿನ ಕಡುಬುಗಳನ್ನು ಮಾಡುವುದು, ದೇವರ ಅಲಂಕಾರಕ್ಕೆ ಸಿದ್ಧತೆ ನಡೆಯುತ್ತಿದೆ. ನಗರದ ಕಾರ್ ಸ್ಟ್ರೀಟ್​ನಲ್ಲಿ ಮಹಿಳೆಯರು ಮೂಡೆ, ಕೊಟ್ಟಿಗೆ, ಗುಂಡ ಎಲೆ ಕಟ್ಟಿ ಮಾರಿದರೆ, ಘಟ್ಟದ ಮೇಲಿನಿಂದ ಬಂದ ವ್ಯಾಪಾರಿಗಳು ಹೂವಿನ ಮಾರಾಟದಲ್ಲಿ ತೊಡಗಿದ್ದಾರೆ.

ಮೊಸರು ಕುಡಿಕೆ ಉತ್ಸವ: ಬಣ್ಣಗಳ ನೀರನ್ನು ಹಾಕಿದ ಮಡಕೆಗಳನ್ನು ಎತ್ತರದಲ್ಲಿ ಕಟ್ಟಿ ಅದನ್ನು ಗೊಲ್ಲ ವೇಷಧಾರಿಗಳು ಒಡೆಯುವ ವಿಟ್ಲಪಿಂಡಿ ಉತ್ಸವಕ್ಕೂ ಸಿದ್ಧತೆಗಳಾಗಿವೆ. ರಥಬೀದಿಗಳಲ್ಲಿ ಹೂವಿನ ವ್ಯಾಪಾರ, ಆಟಿಕೆ, ಪೇಟ್ಲ ಮಾರಾಟ ಜೋರಾಗಿದೆ. ಕೃಷ್ಣಮಠದ ಪಾಕಶಾಲೆಯಲ್ಲಿ ಉಂಡೆಗಳು, ಚಕ್ಕುಲಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಸಿದ್ಧವಾಗಿವೆ. ಈ ಬಾರಿಯ ಅಷ್ಟಮಿಗೆ 3 ಲಕ್ಷ ಉಂಡೆ, 1.25 ಲಕ್ಷ ಚಕ್ಕುಲಿ ಕೃಷ್ಣನಿಗೆ ಸಮರ್ಪಣೆಯಾಗಿ ಭಕ್ತರಿಗೆ ವಿತರಣೆಯಾಗಲಿದೆ.

ಪೊಡವಿಗೊಡೆಯನ ನಾಡಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ (ETV Bharat)

ನಗರದೆಲ್ಲೆಡೆ ಹುಲಿವೇಷದ ಅಬ್ಬರ:ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯೆಂದರೆ ಹುಲಿ ವೇಷದ್ದೇ ಕಲರವ. ಐವತ್ತಕ್ಕೂ ಅಧಿಕ ಹುಲಿವೇಷ ತಂಡಗಳು ಈ ಬಾರಿ ಬಣ್ಣ ಹಚ್ಚಿದ್ದು, ಅಷ್ಟಮಿಯ ಮೊದಲ ದಿನ ದೇವರ ಸೇವೆ ನಡೆಸುವ ಮೂಲಕ ತಮ್ಮ ಪ್ರದರ್ಶನ ಆರಂಭಿಸುತ್ತವೆ. ಲೋಭಾನ ಸೇವೆಯ ನಂತರ ಮನೆ ಮನೆಗಳಿಗೆ ತೆರಳಿ ಹೆಜ್ಜೆ ಹಾಕುತ್ತಾರೆ. ಉಡುಪಿಯ ಮಾರ್ಪಳ್ಳಿ ಚಂಡೆ ಬಳಗ ಪ್ರತಿಷ್ಠಿತ ತಂಡವಾಗಿದ್ದು, ಈ ಬಾರಿ ಅದ್ಧೂರಿ ವೇಷಗಳೊಂದಿಗೆ ತಿರುಗಾಟ ಆರಂಭಿಸಿದ್ದಾರೆ.

ಹುಲಿವೇಷವೆಂದರೆ ಕರಾವಳಿಗರು ರೋಮಾಂಚನಗೊಳ್ಳುತ್ತಾರೆ. ತಾಸೆಯ ಪೆಟ್ಟಿಗೆ ನೂರಾರು ಜನ ಏಕಕಾಲದಲ್ಲಿ ಕುಣಿಯುವುದನ್ನು ನೋಡುವುದೇ ಒಂದು ಸುಂದರ ಅನುಭವ. ಹುಲಿವೇಷ ನೋಡಲೆಂದೇ ಅಷ್ಟಮಿಗೆ ಕಾಯುವ ಲಕ್ಷಾಂತರ ಭಕ್ತರಿದ್ದಾರೆ. ಅಷ್ಟಮಿಯ ಹುಲಿ ವೇಷವೆಂದರೆ ಯುವಕರಿಗೆ ಅದೇನೋ ಉತ್ಸಾಹ. ಗಂಡು ಹೆಣ್ಣು ಬೇಧವಿಲ್ಲದೆ ಹುಲಿಯ ಕುಣಿತಕ್ಕೆ ಹೆಜ್ಜೆ ಹಾಕುತ್ತಾರೆ. ಹುಲಿವೇಷಧಾರಿಗಳು ತಿರುಗಾಟಕ್ಕೆ ಹೊರಡುವ ಮುನ್ನ ಲೋಭಾನ ಸೇವೆ ನಡೆಸುತ್ತಾರೆ. ಈ ವೇಳೆ ದೇವರ ಮುಂದೆ ಗಂಡು-ಹೆಣ್ಣು ಭೇದವಿಲ್ಲದೆ ಜನ ತಾಸೆ ಪೆಟ್ಟಿಗೆ ಹೆಜ್ಜೆ ಹಾಕುತ್ತಾರೆ. ನಗರದ ಅಲೆವೂರು ಪರಿಸರದಲ್ಲಿ ವೀರ ಕೇಸರಿ ತಂಡದವರು ಲೋಭಾನ ಸೇವೆ ನಡೆಸುವ ವೇಳೆ ಹೆಣ್ಣು ಮಕ್ಕಳು ಸಂತೋಷದಿಂದ ಹುಲಿ ವೇಷಕ್ಕೆ ಹೆಜ್ಜೆ ಹಾಕಿ, ಕುಣಿದರು.

"ಅಷ್ಟಮಿ ದಿನ ಕೃಷ್ಣಮಠದಲ್ಲಿ ದೇವರ ದರ್ಶನ ಪಡೆದು ಬಳಿಕ ರಥಬೀದಿಯಲ್ಲಿ ಮತ್ತು ನಗರದಲ್ಲೆಡೆ ಸಂಚಾರ ಮಾಡಿ ಹುಲಿ ವೇಷಧಾರಿಗಳು ಜನರನ್ನು ರಂಜಿಸುತ್ತಾರೆ. ಶಿರೂರು ಮಠದಲ್ಲಿ ಹುಲಿ ವೇಷಧಾರಿಗಳಿಗೆ ನೋಟಿನ ಮಾಲೆಗಳನ್ನು ಸಿದ್ಧಪಡಿಸಲಾಗುತ್ತದೆ. ಈಗಾಗಲೇ ಶಿರೂರು ಮಠದಲ್ಲಿ ಸಾವಿರಾರು ರೂಪಾಯಿಗಳ ನೋಟಿನ ಮಾಲೆ ಸಿದ್ಧಗೊಂಡಿದ್ದು, ಹುಲಿ ವೇಷಧಾರಿಗಳಿಗೆ ಹಂಚಲಾಗುತ್ತದೆ" ಎಂದು ಉದಯ ಕುಮಾರ ಸರಳತ್ತಾಯ ವಿವರಿಸಿದರು.

ಪೊಡವಿಗೊಡೆಯನ ನಾಡಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ (ETV Bharat)

ರಾಜಾಂಗಣದಲ್ಲಿ ರಂಗೋಲಿ, ಮಡಿಕೆಗಳಿಗೆ ಬಣ್ಣ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ವಿವಿಧ ರಂಗೋಲಿಗಳನ್ನು ಹಾಕುವುದು, ಮಡಿಕೆಗಳಿಗೆ ಮಕ್ಕಳು ಬಣ್ಣ ಹಚ್ಚುವ ಕಾರ್ಯ ಕೂಡ ಭರದಿಂದ ಸಾಗಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿವೆ. ಭಕ್ತರಿಗೆ ಉಚಿತ ಹಾಲು ಪಾಯಸ ಊಟದ ವ್ಯವಸ್ಥೆ ಮಾಡಲಾಗಿದ್ದು, ಶ್ರೀ ಕೃಷ್ಣನ ದರ್ಶನ ಪಡೆದು ಪ್ರಸಾದವನ್ನು ಸ್ವೀಕರಿಸುವ ವ್ಯವಸ್ಥೆಯನ್ನು ಸಹ ಮಠದವರು ಕಲ್ಪಿಸಿದ್ದಾರೆ.

ಡೋಲೊತ್ಸವ ಸಂಪನ್ನ:ಶ್ರೀ ಕೃಷ್ಣ ಜನ್ಮಾಷ್ಠಮಿಯ ಮಾಸೋತ್ಸವದ ಅಂಗವಾಗಿ ಶ್ರೀ ಕೃಷ್ಣ ಮಠದಲ್ಲಿ ಬೆಳಗ್ಗೆ 9 ಗಂಟೆಯಿಂದ ಪರ್ಯಾಯ ಶ್ರೀಪಾದರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಡೋಲೊತ್ಸವ ಸಂಪನ್ನಗೊಂಡಿತು.

ಇದನ್ನೂ ಓದಿ:ಮಂಗಳೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಕಣ್ಮನ ಸೆಳೆದ ಕೃಷ್ಣ ವೇಷದ ಪುಟಾಣಿ - krishna Janmashtami 2024

Last Updated : Aug 26, 2024, 7:15 PM IST

ABOUT THE AUTHOR

...view details