ಕರ್ನಾಟಕ

karnataka

ETV Bharat / state

ತಿರುಮಲ ಸನ್ನಿಧಿಯಲ್ಲಿ ನಡೆದ ಲಡ್ಡು ಪ್ರಸಾದ ಘಟನೆ ಅತ್ಯಂತ ಖಂಡನೀಯ: ಸುಗುಣೇಂದ್ರ ತೀರ್ಥ ಶ್ರೀಪಾದರು - TIRUPATI LADDU CONTROVERSY - TIRUPATI LADDU CONTROVERSY

ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿರುಮಲ ಸನ್ನಿಧಿಯಲ್ಲಿ ಲಡ್ಡು ಪ್ರಸಾದಕ್ಕೆ ಕೃತಕ ತುಪ್ಪ ಬೆರಕೆಯಾಗಿರುವ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಬಹುದೊಡ್ಡ ಧಾರ್ಮಿಕ ಸಮಾಜವನ್ನು ಘಾಸಿಗೊಳಿಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

shri-sugunendra-theertha-sripada
ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು (ETV Bharat)

By ETV Bharat Karnataka Team

Published : Sep 22, 2024, 6:10 PM IST

Updated : Sep 22, 2024, 7:07 PM IST

ಉಡುಪಿ :ತಿರುಮಲ ಕ್ಷೇತ್ರದಲ್ಲಿ ಲಡ್ಡು ಪ್ರಸಾದದಲ್ಲಿ ನಡೆದಿರುವ ಕಲಬೆರಕೆಯ ಘಟನೆ ಅತ್ಯಂತ ಖಂಡನೀಯ ಹಾಗೂ ಅಕ್ಷಮ್ಯ ಅಪರಾಧ ಎಂದು ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಪೀಠಾಧಿಪತಿಗಳಾದ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮೀಯರ ಪ್ರಮುಖ ಶ್ರದ್ಧಾ ಕೇಂದ್ರ ತಿರುಪತಿ ಶ್ರೀ ವೆಂಕಟೇಶ್ವರ ದೇವರ ಪರಮ ಪಾವನವಾದ ನೈವೇದ್ಯ ಲಡ್ಡು ಪ್ರಸಾದಕ್ಕೆ ಕೃತಕ ತುಪ್ಪ ಬೆರೆಸಿ ದೊಡ್ಡ ಅಪಚಾರ ಮಾಡಲಾಗಿದೆ. ಈ ಮೂಲಕ ಬಹುದೊಡ್ಡ ಧಾರ್ಮಿಕ ಸಮಾಜವನ್ನು ಘಾಸಿಗೊಳಿಸಲಾಗಿದೆ. ದೇವಸ್ಥಾನ ಮತ್ತು ಮಠ ಮಂದಿರಗಳ ಮೇಲೆ ನಿರಂತರ ನಡೆಯುತ್ತಿರುವ ಆಕ್ರಮಣವನ್ನು ಮೊದಲು ತಡೆಯಬೇಕು ಎಂದು ಒತ್ತಾಯಿಸಿದರು.

ಸುಗುಣೇಂದ್ರ ತೀರ್ಥ ಶ್ರೀಪಾದರು (ETV Bharat)

ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಬೇಕು ;ರಾಜಕೀಯ ಪಕ್ಷಗಳ ಕಪಿಮುಷ್ಠಿಯಿಂದ ದೇವಸ್ಥಾನ ಹಾಗೂ ಮಠ ಮಂದಿರಗಳನ್ನು ಮುಕ್ತಗೊಳಿಸಬೇಕು. ಸನಾತನ ಧರ್ಮದ ರಕ್ಷಣೆಗಾಗಿ ರಾಷ್ಟ್ರಮಟ್ಟದಲ್ಲಿ ಮೊದಲು ಮಂಡಳಿ ರಚಿಸಬೇಕಾಗಿದೆ. ಅದರಂತೆ ಸಂತರ, ಪೀಠಾಧಿಪತಿಗಳ ನೇತೃತ್ವದಲ್ಲಿ ಉತ್ತಮ ಮಾರ್ಗದರ್ಶಕರ ಮಂಡಳಿಯನ್ನು ಸಹ ರಚಿಸಬೇಕು. ಯಾವುದೇ ಕಾರಣಕ್ಕೂ ರಾಜಕೀಯ ಹಸ್ತಕ್ಷೇಪ ಇರಬಾರದು ಎಂದು ಹೇಳಿದರು.

ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥರ ಖಂಡನೆ :ತಿರುಪತಿ ಲಡ್ಡು ಪ್ರಸಾದದಲ್ಲಿ ನಡೆದಿರುವ ಕಲಬೆರಕೆಯ ವಿಚಾರದ ಕುರಿತು ಪ್ರತಿಕ್ರಿಯೆಯನ್ನು ನೀಡಿರುವ ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥರು, ನಮಗೆ ಸಂವಿಧಾನ ಧರ್ಮವನ್ನು ಪಾಲಿಸುವ ಅವಕಾಶ ಕೊಟ್ಟಿದೆ. ಅವಕಾಶ ನಿಜವಾಗಿಯೂ ಕೊಟ್ಟಿದ್ದರೆ ನಮ್ಮ ದೇವಾಲಯಗಳನ್ನು ಸರ್ಕಾರಿ ನಿಯಂತ್ರಣದಿಂದ ಮೊದಲು ಮುಕ್ತಗೊಳಿಸಿ. ಸಂವಿಧಾನ ನೀಡಿದ ಅಧಿಕಾರವನ್ನು ಹತ್ತಿಕ್ಕಬೇಡಿ. ಲಡ್ಡಿನಲ್ಲಿ ಕಲಬೆರಕೆ ಮಾಡಿರುವುದರಿಂದ ನಮ್ಮ ಅಷ್ಟ ಮಠಗಳ ಸ್ವಾಮೀಜಿಗಳಿಗೂ ಬೇಸರದ ಸಂಗತಿಯಾಗಿದೆ. ಹಿಂದೂ ಭಕ್ತರ ಮನಸ್ಸು ಅಪ್ರಸಾದವಾಗಿದೆ ಎಂದು ಬೇಸರವನ್ನು ವ್ಯಕ್ತಪಡಿಸಿದರು.

ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರ ಬೇಸರ : ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು ಅಯೋಧ್ಯೆಯಿಂದ ಹೇಳಿಕೆ ನೀಡಿದ್ದು, ಲಡ್ಡು ಪ್ರಸಾದಕ್ಕೆ ಹಸುವಿನ ತುಪ್ಪದ ಬದಲು ಕೃತಕ ತುಪ್ಪ ಹಾಕಿದ್ದಾರೆ. ಅದನ್ನು ತುಪ್ಪ ಎಂದು ಕರೆಯಲು ಸಾಧ್ಯವಿಲ್ಲ. ಪ್ರಾಣಿಜನ್ಯ ಕೊಬ್ಬಿನ ಮಿಶ್ರಣದಿಂದ ಪ್ರಸಾದ ತಯಾರಿಸಿದ್ದಾರೆ. ಈ ಬೆಳವಣಿಗೆಯಿಂದ ಖೇದವಾಗಿದೆ. ಮೀನಿನ ಎಣ್ಣೆ, ಹಂದಿಯ ಕೊಬ್ಬು, ಹಸುವಿನ ಕೊಬ್ಬು ಬಳಸಿದ್ದಾರೆ. ಇದು ಹಿಂದೂ ಸಮಾಜಕ್ಕೆ ಬಗೆದಿರುವ ದೊಡ್ಡ ಅಪಚಾರ ಮತ್ತು ದೇವರಿಗೆ ಬಗೆದಿರುವ ಅಪಚಾರ. ಸರ್ಕಾರವೇ ಈ ಕೃತ್ಯ ನಡೆಸಿರುವುದು ಖಂಡನಾರ್ಹ ಎಂದಿದ್ದಾರೆ.

ತಿರುಪತಿಯ ಶ್ರೀನಿವಾಸ ದೇವರು, ಗೋವಿನ ರಕ್ಷಣೆಗೆ ಅವತರಿಸಿದವನು. ಅಂತಹ ಕ್ಷೇತ್ರದಲ್ಲಿ ಹಸು, ಹುತ್ತಕ್ಕೆ ಹಾಲು ಎರೆಯುತ್ತಿತ್ತಂತೆ. ಹಸುವಿನ ಮಾಲೀಕ ಹಸುವನ್ನು ಹೊಡೆಯಲು ಬಂದನಂತೆ. ಆಗ ಹುತ್ತದಿಂದ ಮೇಲೆ ಬಂದ ಶ್ರೀನಿವಾಸ ಮಾಲೀಕನ ಏಟಿಗೆ ಮೈಯೊಡ್ಡಿದನಂತೆ. ಹಸುವನ್ನು ರಕ್ಷಿಸಿದ ಶ್ರೀನಿವಾಸ ಅನ್ನೋದು ಇತಿಹಾಸ. ಅಂತಹ ಶ್ರೀನಿವಾಸ ದೇವರಿಗೆ ಹಸುವಿನ ಕೊಬ್ಬಿನ ಪ್ರಸಾದ ನೀಡಿದ್ದೀರಿ. ಇದೊಂದು ಅಪರಾಧವಾಗಿದೆ. ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲಿನ ಹಲ್ಲೆ ಹಾಗೂ ಮನೆಗಳಲ್ಲಿ ಕೂಡ ಇಂತಹ ತುಪ್ಪ ಬಳಸುವುದಿಲ್ಲ. ಮಾತ್ರವಲ್ಲ, ಉಪಯೋಗಕ್ಕೆ ಅನರ್ಹವಾದ ತುಪ್ಪವನ್ನು ದೇವಾಲಯಕ್ಕೆ ಬಳಸಿದ್ದೀರಿ, ಇದು ಸರಿಯಲ್ಲ ಎಂದು ಹೇಳಿದ್ದಾರೆ.

ಇಂತಹ ತುಪ್ಪ ತಯಾರಿಸುವ ಅಡ್ಡೆಗಳನ್ನು ಮೊದಲು ಸರ್ಕಾರ ಕಂಡುಹಿಡಿಯಬೇಕು. ಇದು ಸರ್ಕಾರದ ಮೊದಲ ಕರ್ತವ್ಯ ಕೂಡ ಆಗಿದೆ. ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸರ್ಕಾರದ ಹಿಡಿತದಲ್ಲಿ ಇರಬಾರದು. ಶ್ರದ್ಧಾ ಕೇಂದ್ರಗಳು ಹಿಂದೂ ಸಮಾಜದ ಕೈಯಲ್ಲಿರಬೇಕು. ಸರ್ವೋಚ್ಚ ನ್ಯಾಯಾಲಯದ ತೀರ್ಪು ಹೀಗೆ ಹೇಳಿದೆ. ತಡ ಮಾಡದೆ ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಿ, ಹಿಂದೂಗಳ ಸಂಸ್ಥೆಗೆ ತಿರುಪತಿ ದೇವಾಲಯದ ಆಡಳಿತ ನೀಡಿ. ಇದು ಸರ್ಕಾರಗಳ ಆದ್ಯ ಕರ್ತವ್ಯ. ಇನ್ನು ಮುಂದೆ ಇಂತಹ ಘಟನೆ ಮರುಕಳಿಸಬಾರದು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ :ತಿರುಪತಿ ಲಡ್ಡುವಿನಲ್ಲಿ ಮಾಂಸದ ಕೊಬ್ಬು: ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು - ಪ್ರಲ್ಹಾದ್ ಜೋಶಿ - Union minister pralhad joshi

Last Updated : Sep 22, 2024, 7:07 PM IST

ABOUT THE AUTHOR

...view details