ಕರ್ನಾಟಕ

karnataka

ETV Bharat / state

ದತ್ತಪೀಠದಲ್ಲಿ ದತ್ತಮಾಲಾ ಸಂಭ್ರಮ; ಮಾಲಾಧಾರಿಗಳಿಂದ ಪಡಿ ಸಂಗ್ರಹ - PADI COLLECTION

ದತ್ತಪೀಠದಲ್ಲಿ ದತ್ತಮಾಲಾ ಸಂಭ್ರಮದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಚಿಕ್ಕಮಗಳೂರಿನ ವಿವಿಧ ಬಡಾವಣೆಗಳಲ್ಲಿ ಪಡಿ ಸಂಗ್ರಹಿಸಿದ್ದಾರೆ.

shri-ram-sena-activists-collected-padi
ದತ್ತಮಾಲಾಧಾರಿಗಳಿಂದ ಪಡಿ ಸಂಗ್ರಹ (ETV Bharat)

By ETV Bharat Karnataka Team

Published : Nov 9, 2024, 6:40 PM IST

ಚಿಕ್ಕಮಗಳೂರು : ದತ್ತಮಾಲಾ ಅಭಿಯಾನದ ಹಿನ್ನೆಲೆಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ನಗರದ ವಿವಿಧ ಬಡಾವಣೆಗಳಲ್ಲಿ ಮನೆ - ಮನೆಗೆ ತೆರಳಿ ಪಡಿ ಸಂಗ್ರಹ ಮಾಡಿದರು.

ದತ್ತಮಾಲೆ ಧರಿಸಿದ್ದ 30ಕ್ಕೂ ಹೆಚ್ಚು ಶ್ರೀರಾಮಸೇನೆ ಕಾರ್ಯಕರ್ತರು ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಅವರ ನೇತೃತ್ವದಲ್ಲಿ ವಿಜಯಪುರ ರಸ್ತೆ, ಕೋಟೆ ಬಡಾವಣೆ, ಬಸವನಹಳ್ಳಿಯ ಹತ್ತಾರು ಮನೆಗಳಲ್ಲಿ ದವಸ-ಧಾನ್ಯ, ತೆಂಗಿನಕಾಯಿ, ಅಕ್ಕಿ-ಬೆಲ್ಲ ಮುಂತಾದ ವಸ್ತುಗಳನ್ನ ಪಡಿ ಸಂಗ್ರಹದ ರೂಪದಲ್ಲಿ ಪಡೆದರು.

ದತ್ತಮಾಲಾ ಅಭಿಯಾನದ ಹಿನ್ನೆಲೆಯಲ್ಲಿ ಕನಿಷ್ಠ 5 ಮನೆಗಳಲ್ಲಾದರೂ ಪಡಿ ಸಂಗ್ರಹ ಮಾಡುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಅದರಂತೆ ಈ ಬಾರಿಯೂ ಮಾಲಾಧಾರಿಗಳು ಹತ್ತಾರು ಮನೆಗಳಿಗೆ ಹೋಗಿ ಪಡಿ ಸಂಗ್ರಹಿಸಿದರು.

ಪಡಿ ಸಂಗ್ರಹದ ವೇಳೆ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಮಾತನಾಡಿ, 'ಗುರುಗಳಿಗೆ ಪ್ರಿಯವಾದ ಪಡಿ ಸಂಗ್ರಹಣೆಯನ್ನು ಇಂದು ಮಾಡುತ್ತಿದ್ದೇವೆ. ದತ್ತಮಾಲೆ ಧಾರಣೆ ಮಾಡಿದ ಬಳಿಕ ಭಿಕ್ಷಾಟನೆ ಮಾಡಿ, ಪಡಿ ಸಂಗ್ರಹಿಸಿದಾಗ ನಮ್ಮ ಮನಸ್ಸಿನಲ್ಲಿರುವ ಲೋಭ, ಅಹಂಕಾರವೆಲ್ಲವೂ ನಿವಾರಣೆಯಾಗುತ್ತದೆ ಎಂಬುದು ಗುರುಗಳ ಅಭಿಪ್ರಾಯ. ಹೀಗಾಗಿ, ನಾವೂ ದತ್ತಮಾಲೆ ಧರಿಸಿ, ಪಡಿ ಸಂಗ್ರಹಣೆ ಮಾಡಿದ್ದೇವೆ' ಎಂದು ಹೇಳಿದರು.

ದತ್ತಪೀಠದಲ್ಲಿ ವಿಶೇಷ ಹೋಮ-ಹವನ: ''ಕೇವಲ ಚಿಕ್ಕಮಗಳೂರು ಮಾತ್ರವಲ್ಲದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಶ್ರೀರಾಮ ಸೇನೆ ಕಾರ್ಯಕರ್ತರು ಪಡಿ ಸಂಗ್ರಹಣೆ ಮಾಡಿದ್ದಾರೆ. ನಾಳೆ ದತ್ತಪೀಠದಲ್ಲಿ ವಿಶೇಷ ಹೋಮ-ಹವನ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಶ್ರೀರಾಮಸೇನೆ ಕಾರ್ಯಕರ್ತರು ಆಗಮಿಸಲಿದ್ದಾರೆ'' ಎಂದರು.

ನಾಳೆ ಸಾವಿರಾರು ದತ್ತಮಾಲಾಧಾರಿಗಳು ನಗರದಲ್ಲಿ ಬೃಹತ್ ಶೋಭಾಯಾತ್ರೆ, ಧರ್ಮಸಭೆ ನಡೆಸಿ ಇರುಮುಡಿ ಹೊತ್ತು ದತ್ತಾತ್ರೇಯ ಹಾಗೂ ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ದಾಖಲೆಗಳ ಪ್ರಕಾರ ದತ್ತಪೀಠ ಹಿಂದೂ ಪೀಠವೇ ಆಗಿದೆ. ದತ್ತಪೀಠವೇ ಬೇರೆ, ದರ್ಗಾವೇ ಬೇರೆ. ಶೀಘ್ರವೇ ದತ್ತಪೀಠವನ್ನು ಹಿಂದೂಗಳ ಪೀಠವೆಂದು ಘೋಷಿಸಬೇಕೆಂದು ಮಾಲಾಧಾರಿಗಳು ಸರ್ಕಾರಕ್ಕೆ ಆಗ್ರಹಿಸಿದರು.

ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ: ಕಳೆದ ಏಳು ದಿನಗಳಿಂದ ನಡೆಯುತ್ತಿರುವ ದತ್ತಮಾಲಾ ಅಭಿಯಾನಕ್ಕೆ ನಾಳೆ ತೆರೆ ಬೀಳಲಿದೆ. ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆ ನಡೆಸಿ, ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ.

ಇದನ್ನೂ ಓದಿ :ದತ್ತಮಾಲಾ ಅಭಿಯಾನ.. ಪಡಿ ಸಂಗ್ರಹಿಸಿದ ಶ್ರೀರಾಮಸೇನೆ ಸಂಘಟನೆ ಮಾಲಾಧಾರಿಗಳು

ABOUT THE AUTHOR

...view details