ದಾವಣಗೆರೆ: "ನಮಗೆ ಎಷ್ಟು ಅಪಮಾನ ಆಗಿದೆ ಎಂದರೆ ಬೇರೆಯಾರಾದರೂ ಆಗಿದ್ದರೆ ನೇಣು ಹಾಕಿಕೊಳ್ಳಬೇಕಿತ್ತು. ನಾವು ಹಾಕಿಕೊಂಡಿಲ್ಲ" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಭಾನುವಾರ ಮಾತನಾಡಿದ ಅವರು, "ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಗೃಹ ಪ್ರವೇಶವಿದೆ. ಹೀಗಾಗಿ ದೆಹಲಿಗೆ ತೆರಳುತ್ತಿದ್ದೇವೆ "ಎಂದರು. ಮುಂದುವರೆದ ಯತ್ನಾಳ್, "ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪರವಾಗಿ ನಮ್ಮ ವಿರುದ್ಧದ ವರದಿಗಳು ಬರುತ್ತಿದೆ. ದೆಹಲಿಯಲ್ಲಿ ರಾಷ್ಟ್ರೀಯ ನಾಯಕರು ಸಿಗುತ್ತಾರೋ, ಇಲ್ಲವೋ ಎನ್ನುವುದು ನಿಮಗೆ ಏಕೆ ಹೇಳಲಿ. ನಾವು ದೆಹಲಿಗೆ ಹೋಗುತ್ತೇವೆ, ನನ್ನ ಪ್ರಯತ್ನ ಮಾಡುತ್ತೇನೆ" ಎಂದರು.
ದಾವಣಗೆರೆಯಲ್ಲಿ ಎರಡು ಹಂದಿಗಳಿವೆ: "ಹಾದಿ ಬೀದಿಯಲ್ಲಿ ಹಂದಿಗಳು ಹೇಳುತ್ತವೆ ಎಂದರೆ ಅವರಿಗೆ ನಾನೇಕೆ ಉತ್ತರ ನೀಡಲಿ. ದಾವಣಗೆರೆಯಲ್ಲಿ ಎರಡು ಹಂದಿಗಳು ಇವೆ. ಶಿವಾನಂದ ಸರ್ಕಲ್‌ನಲ್ಲಿ ವಿಜಯೇಂದ್ರ ಮನೆ ಮುಂದೆ ನೀವು ನಿಲ್ಲಿ ಅವರ ಗುಣಗಾನ ಮಾಡಿ ಎಂದು ಹೇಳಿದ್ದಾರೆ. ಇನ್ನು ದೆಹಲಿಯಲ್ಲಿ ಎಎಪಿ ಹೀನಾಯವಾಗಿ ಸೋಲಲು ಕಾರಣ ಅವರ ಭ್ರಷ್ಟಾಚಾರ. ಅದಕ್ಕಾಗಿ ರಾಜ್ಯದಲ್ಲಿ ಕೂಡ ಭ್ರಷ್ಟಾಚಾರ ರಹಿತವಾಗಿ ಮಾಡಲು ನಿರ್ಧಾರ ಮಾಡಿದ್ದೇವೆ" ಎಂದು ಟಾಂಗ್ ಕೊಟ್ಟರು.
ಶ್ರೀರಾಮುಲು ಯಾತ್ರೆಗೆ ಬೆಂಬಲ: ಒಡೆದ ಮನಸ್ಸುಗಳ ಒಂದು ಮಾಡಲು ಮಾಜಿ ಸಚಿವ ಶ್ರೀರಾಮುಲು ಅವರು ಕೈಗೊಂಡಿರುವ ಯಾತ್ರೆ ವಿಚಾರವಾಗಿ ಮಾತನಾಡಿದ ಯತ್ನಾಳ್, "ರಾಮುಲು ಅವರದ್ದು ಒಳ್ಳೆಯ ವಿಚಾರ. ನಾನು ಸ್ವಾಗತ ಮಾಡುತ್ತೇನೆ. ಒಡೆದ ಮನಸ್ಸುಗಳನ್ನು ಒಂದು ಮಾಡುವುದು ಒಳ್ಳೆಯದ್ದೇ. ಭ್ರಷ್ಟಾಚಾರ ಮಾಡುವವರ, ಕುಟುಂಬ ರಾಜಕಾರಣದ ವಿರುದ್ಧ ನಾವಿದ್ದೇವೆ. ನಾನು ರಾಜ್ಯಾಧ್ಯಕ್ಷ ಹಾಗೂ ಸಿಎಂ ಆಗುತ್ತೇನೆ. ನಾನು ಕೂಡ ಆ ಸ್ಥಾನಕ್ಕೆ ಅರ್ಹನಿದ್ದೇನೆ" ಎಂದರು.
ಇದನ್ನೂ ಓದಿ: ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು : ಸಚಿವ ಕೆ.ರಾಜಣ್ಣ ಪ್ರತಿಕ್ರಿಯೆ ಹೀಗಿದೆ