ಶಿವಮೊಗ್ಗ: ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸಿಬ್ಬಂದಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದಾರೆ. ಅಕೌಂಟ್ ಸೆಕ್ಷನ್ ಕೇಸ್ ವರ್ಕರ್ ಸಿದ್ದೇಶ್ ಲೋಕಾ ದಾಳಿಗೆ ಒಳಗಾದವರು.
ಹೊಸನಗರದ ಗುತ್ತಿಗೆದಾರ ಸುನೀಲ್ ಕುಮಾರ್ ಎಂಬುವರು ದೂರು ನೀಡಿದ್ದು, ದೂರಿನನ್ವಯ ಕಾಮಗಾರಿ ಬಿಲ್ ಪಾಸ್ ಮಾಡಲು 10 ರೂ. ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸುನೀಲ್ ಕುಮಾರ್ ಮಹಾನಗರ ಪಾಲಿಕೆ ಆವರಣದ ಇಂಜಿನಿಯರ್ ಕಟ್ಟಡದ ಮೇಲ್ಛಾವಣಿ ನಿರ್ಮಾಣಕ್ಕೆ ಇ-ಟೆಂಡರ್ನಲ್ಲಿ 4.66 ಲಕ್ಷ ರೂ.ಗೆ ಗುತ್ತಿಗೆ ಪಡೆದಿದ್ದರು. 2024ರ ಡಿಸೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಹಣ ಮಂಜೂರು ಮಾಡುವಂತೆ ಬಿಲ್ ಸಲ್ಲಿಸಿದ್ದರು.
ಬಿಲ್ಗಾಗಿ ಪಾಲಿಕೆಯ ಸೆಕ್ಷನ್ ಆಫೀಸರ್ ಸ್ವಾತಿ ನಾಯ್ಕ ಅವರ ಬಳಿ ಹೋಗಿ ಎರಡ್ಮೂರು ಬಾರಿ ಕೇಳಿದಾಗ, ಅವರು ನಿಮ್ಮ ಬಿಲ್ ಅಕೌಂಟ್ ಸೆಕ್ಷನ್ ಕೇಸ್ ವರ್ಕರ್ ಸಿದ್ದೇಶ್ ಅವರ ಬಳಿ ಹೋಗಿದೆ. ಅವರ ಬಳಿ ವಿಚಾರಿಸಲು ಸೂಚಿಸಿದ್ದರು.
ಅದರಂತೆ ಸುನೀಲ್ ಕುಮಾರ್ ಅವರು ಸಿದ್ದೇಶ್ ಅವರನ್ನು ಭೇಟಿ ಮಾಡಿದಾಗ ಬಿಲ್ ಪಾವತಿ ಮಾಡಲು ಶೇ.4ರಷ್ಟು ಕಮಿಷನ್ (11.500 ರೂ.)ಗೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಇಷ್ಟವಿರದ ಸುನೀಲ್ ಕುಮಾರ್ ಲೋಕಾಯುಕ್ತ ಪೊಲೀಸರಲ್ಲಿ ದೂರು ನೀಡಿದ್ದರು.
ಸಿದ್ದೇಶ್ ಗುತ್ತಿಗೆದಾರ ಸುನೀಲ್ ಅವರಿಂದ 10 ಸಾವಿರ ರೂ. ಲಂಚ ಪಡೆಯುವಾಗ ಲೋಕಾದವರು ದಾಳಿ ನಡೆಸಿದ್ದಾರೆ. ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಪ್ರಕಾಶ್ ನಡೆಸಿದ್ದಾರೆ. ಲೋಕಾ ಅಧೀಕ್ಷಕ ಮಂಜುನಾಥ ಚೌಧರಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ಇ-ಖಾತೆ ಮಾಡಿಕೊಡಲು 5 ಸಾವಿರ ರೂ. ಲಂಚ, ರೆಡ್ಹ್ಯಾಂಡಾಗಿ ಲೋಕಾ ಬಲೆಗೆ ಬಿದ್ದ ಪಿಡಿಒ - LOKAYUKTA TRAP