ಕಾರವಾರ (ಉತ್ತರ ಕನ್ನಡ) :ಅಂಕೋಲಾದ ಶಿರೂರು ಬಳಿ ಬೃಹತ್ ಗುಡ್ಡ ಕುಸಿದು ನಾಪತ್ತೆಯಾಗಿದ್ದ ಚಾಲಕ ಸಹಿತ ಭಾರತ್ ಬೆಂಜ್ ಕಟ್ಟಿಗೆ ಲಾರಿ ಬುಧವಾರ ಪತ್ತೆಯಾಗಿದೆ. ಆದರೆ ನಾಪತ್ತೆಯಾದ ಸ್ಥಳೀಯರಿಬ್ಬರಿಗೆ ಹುಡುಕಾಟ ಮುಂದುವರಿದಿದೆಯಾದರೂ ಕುಟುಂಬಸ್ಥರಿಗೆ ಕಾರ್ಯಾಚರಣೆ ಸ್ಥಗಿತಗೊಳಿಸುವ ಭಯ ಕಾಡತೊಡಗಿದೆ.
ಜು.16 ರಂದು ಮುಂಜಾನೆ ಅಂಕೋಲಾದ ಶಿರೂರು ಬಳಿ ಸಂಭವಿಸಿದ ಬೃಹತ್ ಗುಡ್ಡ ಕುಸಿತದ ವೇಳೆ ಲಾರಿಯಲ್ಲಿದ್ದ ಕೇರಳ ಮೂಲದ ಚಾಲಕ ಅರ್ಜುನ್ ನಾಪತ್ತೆಯಾಗಿದ್ದರು. ಬುಧವಾರ ನಡೆದ ಕಾರ್ಯಾಚರಣೆ ವೇಳೆ ಭಾರತ್ ಬೆಂಜ್ ಲಾರಿಯನ್ನು ಗೋವಾದ ಡ್ರೆಜ್ಜಿಂಗ್ ಯಂತ್ರದಲ್ಲಿರುವ ಕ್ರೇನ್ ಮೂಲಕ ಹೊರತೆಗೆದಿದ್ದು, ಅರ್ಜುನ್ ಮೃತದೇಹ ಕೂಡ ಲಾರಿಯ ಕ್ಯಾಬಿನ್‌ನಲ್ಲಿಯೇ ಪತ್ತೆಯಾಗಿದೆ. ಇದರೊಂದಿಗೆ 72 ದಿನಗಳ ಬಳಿಕ ಅರ್ಜುನ್ ಹಾಗೂ ಲಾರಿಯ ಅವಶೇಷಗಳು ಪತ್ತೆಯಾಗಿದ್ದು, ಲಾರಿ ಕೂಡ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಜಗನ್ನಾಥ ನಾಯ್ಕ ಮಗಳು ಕೃತಿಕಾ ನಾಯ್ಕ (ETV Bharat) ನಾಪತ್ತೆಯಾಗಿದ್ದ ಸ್ಥಳೀಯರಿಬ್ಬರ ಕಳೆಬರಹ ಪತ್ತೆಯಾಗಿಲ್ಲ:ಆದರೆ, ಇನ್ನೂ ಕೂಡ ನಾಪತ್ತೆಯಾಗಿರುವ ಹೋಟೆಲ್ನಲ್ಲಿದ್ದ ಸ್ಥಳೀಯರಾದ ಜಗನ್ನಾಥ ನಾಯ್ಕ ಹಾಗೂ ಹೋಟೆಲ್ಗೆ ಆಗಮಿಸಿದ್ದರು ಎನ್ನಲಾದ ಲೋಕೇಶ್ ನಾಯ್ಕ ಪತ್ತೆಯಾಗಿಲ್ಲ. ಸದ್ಯ ಡ್ರೆಜ್ಜಿಂಗ್ ಯಂತ್ರದ ಮೂಲಕ ಕಾರ್ಯಾಚರಣೆ ನಡೆದಿದೆಯಾದರೂ, ಈವರೆಗೂ ಯಾವುದೇ ಸುಳಿವು ಪತ್ತೆಯಾಗಿಲ್ಲ.
'ಸದ್ಯ ಗುಡ್ಡ ಕುಸಿತದ ವೇಳೆ ನಾಪತ್ತೆಯಾಗಿ ದೂರು ದಾಖಲಾಗಿದ್ದ ಎಲ್ಲ ವಾಹನಗಳನ್ನು ಕಾರ್ಯಾಚರಣೆ ವೇಳೆ ಹೊರತೆಗೆದಿದ್ದು, ಬೆಂಜ್ ಲಾರಿ ಹಿಂಭಾಗ ಹಾಗೂ ಇಬ್ಬರ ಮೃತದೇಹ ಮಾತ್ರ ಪತ್ತೆಯಾಗಬೇಕಾಗಿದೆ. ಕಾರ್ಯಾಚರಣೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಮಾಡಬಾರದು. ನಮ್ಮ ತಂದೆಯ ಮೃತದೇಹ ಹೊರತೆಗೆಯಬೇಕು. ಕೊನೆಯ ಪಕ್ಷ ಒಂದು ಮೂಳೆಯಾದರೂ ನಮಗೆ ಬೇಕು. ನಾವು ಯಾವುದೇ ಕಾರ್ಯ ಮಾಡಿಲ್ಲ. ಅಲ್ಲದೆ ನಮಗೆ ತಂದೆಯ ಮರಣ ದಾಖಲೆ ಕೂಡ ನೀಡುವುದಿಲ್ಲ ಎನ್ನುತ್ತಿದ್ದಾರೆ. ಇದು ಸರಿಯಲ್ಲ. ಈ ಕಾರ್ಯಾಚರಣೆ ಮೂಲಕ ನಮ್ಮವರನ್ನು ಪತ್ತೆಮಾಡಬೇಕು' ಎಂದು ನಾಪತ್ತೆಯಾಗಿರುವ ಜಗನ್ನಾಥ ನಾಯ್ಕ ಮಗಳು ಕೃತಿಕಾ ನಾಯ್ಕ ಒತ್ತಾಯಿಸಿದ್ದಾರೆ.
ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ಶಾಸಕ ಸತೀಶ್ ಸೈಲ್;ಶಾಸಕ ಸತೀಶ್ ಸೈಲ್ ಅವರು ಮಾತನಾಡಿ, 'ಜು.16 ರಂದು ದಾಂಡೇಲಿಯಿಂದ ಕಟ್ಟಿಗೆಯನ್ನು ತುಂಬಿಕೊಂಡು ಕೇರಳಕ್ಕೆ ಹೊರಟಿದ್ದ ಲಾರಿ ಚಾಲಕ ಅರ್ಜುನ್ ನಿದ್ರೆ ಬರುತ್ತಿರುವ ಬಗ್ಗೆ ಮತ್ತೊಂದು ಲಾರಿಯ ಡ್ರೈವರ್‌ಗೆ ತಿಳಿಸಿ, ಶಿರೂರು ಬಳಿ ನಿದ್ರೆಗೆ ಜಾರಿದ್ದರು. ಆದರೆ, ಅಂದು ಸುರಿದ ಭಾರಿ ಮಳೆ ಬೆನ್ನಲ್ಲೇ ಕುಸಿದ ಬೃಹತ್ ಪ್ರಮಾಣದ ಮಣ್ಣಿನಡಿ ಲಾರಿ ಕೂಡ ನಾಪತ್ತೆಯಾಗಿತ್ತು. ಹೆದ್ದಾರಿ ಪಕ್ಕದಲ್ಲಿದ್ದ ಹೋಟೆಲ್ ಹಾಗೂ ಮನೆಯಲ್ಲಿದ್ದ ಐದು ಮಂದಿ ಸೇರಿ ಒಟ್ಟು 11 ಮಂದಿ ನಾಪತ್ತೆಯಾಗಿದ್ದರು.
ಆ ಬಳಿಕ ಸುಮಾರು ಒಂದು ತಿಂಗಳ ಕಾಲ ನಡೆದ ಕಾರ್ಯಾಚರಣೆ ವೇಳೆ ಕೇವಲ 8 ಮೃತದೇಹಗಳು ಮಾತ್ರ ಪತ್ತೆಯಾಗಿದ್ದವು. ಅಲ್ಲದೇ ಮಳೆ ಕೂಡ ಜೋರಾಗಿ ನದಿಯ ಹರಿವಿನ ಮಟ್ಟ ಹೆಚ್ಚಾದ ಹಿನ್ನಲೆ ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಲಾಗಿತ್ತು. ಆದರೆ, ಮಳೆ ಕಡಿಮೆಯಾಗಿ ನದಿಯಲ್ಲಿ ನೀರಿನ ಮಟ್ಟವೂ ಇಳಿಕೆಯಾದ ಹಿನ್ನೆಲೆ ಕಳೆದ ಆರು ದಿನಗಳಿಂದ ಗೋವಾ ಮೂಲದ ಡ್ರೆಜ್ಜಿಂಗ್ ಯಂತ್ರದ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅರ್ಜುನ್ ಮೃತದೇಹ ಸಿಕ್ಕರೂ ನಮ್ಮ ಸ್ಥಳೀಯ ಇಬ್ಬರಿಗಾಗಿ ಹುಡುಕಾಟ ಮುಂದುವರಿಸುತ್ತೇವೆ. ಅದು 10 ದಿನ ಕಳೆದರೂ ಕಾರ್ಯಾಚರಣೆ ನಿಲ್ಲಿಸುವುದಿಲ್ಲ. ಡ್ರೆಜ್ಜಿಂಗ್ ಯಂತ್ರ ತಂದ ಆರಂಭದಲ್ಲಿ ಸುಮ್ಮನೆ ಶೋ ಮಾಡಲು ತಂದಿದ್ದಾರೆ ಎಂದರು. ಆದರೆ ಈ ಆರೋಪಗಳಿಗೆ ತಲೆ ಕೆಡೆಸಿಕೊಂಡಿಲ್ಲ. ಇದೀಗ ಕಾರ್ಯಾಚರಣೆ ಪ್ರತಿಫಲ ದೊರೆತಿದೆ' ಎಂದಿದ್ದಾರೆ.
ಹುಡುಕಾಟದ ಬಗ್ಗೆ ಎಸ್ಪಿ ಹೇಳಿದ್ದಿಷ್ಟು:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರು ಮಾತನಾಡಿ, 'ಗಂಗಾವಳಿಯಲ್ಲಿ ನಾಪತ್ತೆಯಾದವರ ಪತ್ತೆಗೆ ಗುಡ್ಡ ಕುಸಿತದ ಕೆಲ ದಿನದ ಬಳಿಕ ದೆಹಲಿಯ ಕ್ವಿಕ್ ಪೇ ಪ್ರೈವೇಟ್ ಲಿಮಿಟೆಡ್ನ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನದೊಂದಿಗೆ ನಿವೃತ್ತ ಮೇಜರ್ ಇಂದ್ರಬಾಲನ್ ತಂಡ ನದಿಯಲ್ಲಿ ಹುಡುಕಾಟ ನಡೆಸಿ, ಲೋಹ ರೂಪದ ವಸ್ತುಗಳು ಇರುವ ಬಗ್ಗೆ ನಾಲ್ಕು ಪಾಯಿಂಟ್‌ಗಳನ್ನು ಪತ್ತೆ ಮಾಡಿತ್ತು. ಅದರಂತೆ ಕಳೆದ 6 ದಿನಗಳಿಂದ ಒಂದೊಂದೇ ಪಾಯಿಂಟ್ ಬಳಿ ಹುಡುಕಾಟ ನಡೆಸಿದಾಗ ಗುಡ್ಡ ಕುಸಿತದ ವೇಳೆ ನಾಪತ್ತೆಯಾಗಿದ್ದ ಅವಶೇಷಗಳು ಪತ್ತೆಯಾಗಿದ್ದವು. ಇದೀಗ ಮೂರನೇ ಪಾಯಿಂಟ್‌ನಲ್ಲಿಯೇ ಲಾರಿ ಪತ್ತೆಯಾಗಿದೆ.
ಇನ್ನು ಕಾರ್ಯಾಚರಣೆಯಲ್ಲಿ ಆರಂಭದಿಂದಲೂ ಉತ್ತರಕನ್ನಡ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಶ್ರಮಿಸಿದ್ದಾರೆ. ಇದೀಗ ಲಾರಿ ಸಿಕ್ಕಿರುವುದು ಒಂದು ರೀತಿಯ ತಾರ್ಕಿಕ ಅಂತ್ಯಕ್ಕೆ ಬಂದಿದೆ. ಇನ್ನು ಇಬ್ಬರ ಮೃತದೇಹ ಸಿಗಬೇಕು. ಅವರಿಗಾಗಿ ಹುಟುಕಾಟ ಮುಂದುವರೆಸಲಾಗುವುದು. ಈ ಕಾರ್ಯಾಚರಣೆ ವೇಳೆ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳು ನೈಜ ವರದಿ ಬಿತ್ತರಿಸಿದ್ದರಿಂದ ಈ ಕಾರ್ಯಾಚರಣೆ ಯಶಸ್ಸಿನ ಶೇ.50 ಕ್ರೆಡಿಟ್ ಮಾಧ್ಯಮಗಳಿಗೆ ಸಲ್ಲಿಸುತ್ತೇನೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ :ಶಿರೂರು ಬಳಿ ಮತ್ತೆ ಕಾರ್ಯಾಚರಣೆ ಆರಂಭ: ಬೃಹತ್ ಬಾರ್ಜ್ ಸಹಿತ ಡ್ರಜ್ಜಿಂಗ್ ಮಶಿನ್ ಮೂಲಕ ಶೋಧ - Shiruru Landslide Search Operation