ಕಾರವಾರ(ಉತ್ತರ ಕನ್ನಡ):ಅಂಕೋಲಾ ತಾಲೂಕಿನ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ಕುಸಿದು ಬಿದ್ದ ಗುಡ್ಡ 11 ಜನರನ್ನು ಬಲಿ ಪಡೆದಿತ್ತು. ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಅಗಲೀಕರಣದಿಂದಾಗಿ ಗುಡ್ಡ ಕುಸಿದು ಆರು ತಿಂಗಳಾದರೂ ರಸ್ತೆ ಮೇಲೆ ಬಿದ್ದ ಹಾಗೂ ನದಿ ಮಧ್ಯದಲ್ಲಿರುವ ಗುಡ್ಡದ ಮಣ್ಣನ್ನು ತೆರವು ಮಾಡಲು ಮುಂದಾಗದೇ ಇರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಸ್ಥಳೀಯರಾದ ಸುಭಾಷ್ ಕಾರೇಬೈಲು ಮಾತನಾಡಿ, "ಘಟನೆ ನಡೆದು ಆರು ತಿಂಗಳು ಕಳೆದಿದೆ. ಗುಡ್ಡದ ಮಣ್ಣು ತೆರವು ಮಾಡುವ ಕಾರ್ಯ ಮಾತ್ರ ಯಾರೂ ಮಾಡುತ್ತಿಲ್ಲ. ಹೆದ್ದಾರಿಯ ಒಂದು ರಸ್ತೆಯಲ್ಲಿದ್ದ ಮಣ್ಣು ತೆಗೆದು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಆದರೆ ಇನ್ನೊಂದು ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಣ್ಣಿದ್ದರೂ ತೆರವು ಮಾಡಿಲ್ಲ. ಇನ್ನೊಂದೆಡೆ, ನದಿಯ ಮಧ್ಯದಲ್ಲೂ ಸಹ ಸಾವಿರಾರು ಟನ್ ಮಣ್ಣು ಇದ್ದು, ಅದನ್ನೂ ಸಹ ತೆಗೆಯುವ ಕಾರ್ಯವಾಗಿಲ್ಲ. ಮುಂದಿನ ಮಳೆಗಾಲದ ವೇಳೆ ನದಿ ಮಧ್ಯದಲ್ಲಿ ಮಣ್ಣು ಇದ್ದರೆ ನದಿ ಸುತ್ತಮುತ್ತಲಿನ ಗ್ರಾಮಕ್ಕೆ ನೀರು ನುಗ್ಗಿ ಮತ್ತೆ ಸಮಸ್ಯೆಯಾಗುವ ಆತಂಕವಿದೆ" ಎಂದರು.