ಹಾವೇರಿ:ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನೇ ದಿನೇ ಕಾವೇರುತ್ತಿದೆ. ಮುಡಾ ಟೆನ್ಶನ್ ನಡುವೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರ ದಂಡು ಸೋಮವಾರ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಪರ ಪ್ರಚಾರ ಸಭೆಗಳನ್ನು ನಡೆಸಿದರು. ಇಂದೂ ಕೂಡಾ ಸಿಎಂ ಮತಯಾಚನೆ ಮುಂದುವರಿಸಲಿದ್ದು ಸಚಿವರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಹೆಚ್.ಕೆ.ಪಾಟೀಲ್ ಹಾಗೂ ಶಿವಾನಂದ ಪಾಟೀಲ್ ಪಾಲ್ಗೊಳ್ಳಲಿದ್ದಾರೆ.
ಸಿದ್ದರಾಮಯ್ಯ ಇಂದು ತಡಸ, ಚಂದಾಪುರ, ಸವಣೂರು ಪಟ್ಟಣದಲ್ಲಿ ಬೃಹತ್ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಮಾವೇಶಗಳಲ್ಲಿ ಪ್ರಮುಖವಾಗಿ ಮುಡಾ ಹಗರಣದಲ್ಲಿ ತಮ್ಮ ವಿರುದ್ಧದ "ಷಡ್ಯಂತ್ರ", ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡುವುದು ಹಾಗೂ ವಕ್ಫ್ ವಿಚಾರದಲ್ಲಿ ಬಿಜೆಪಿ ರೈತರನ್ನು ದಾರಿ ತಪ್ಪಿಸುತ್ತಿದೆ ಎನ್ನುವ ಮೂರು ವಿಚಾರಗಳನ್ನು ಅವರು ಪ್ರಸ್ತಾಪಿಸುತ್ತಿದ್ದಾರೆ.
ಲೋಕಾಯುಕ್ತ ವಿಚಾರಣೆಗೆ ಹಾಜರಾಗುವೆ- ಸಿಎಂ: ನಿನ್ನೆ ಸವಣೂರು ತಾಲೂಕಿನ ಹುರಳಿಕೊಪ್ಪಿಯಲ್ಲಿ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ನೋಟಿಸ್ ನೀಡಿರುವ ಕುರಿತು ಪ್ರತಿಕ್ರಿಯಿಸಿ, "ನವೆಂಬರ್ 6ರಂದು ಲೋಕಾಯುಕ್ತ ವಿಚಾರಣೆಗೆ ಹಾಜರಾಗುತ್ತೇನೆ" ಎಂದು ತಿಳಿಸಿದರು.
ಬಿಜೆಪಿ ಪ್ರತಿಭಟನಾ ಮೆರವಣಿಗೆ: ಇತ್ತ ಕಾಂಗ್ರೆಸ್ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಮಾಜಿ ಸಿಎಂ, ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಪ್ರತಾಪ್ ಸಿಂಹ, ಸಿ.ಟಿ.ರವಿ ಸೇರಿದಂತೆ ಹಲವು ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಸರ್ಕಾರ ರೈತರ ಜಮೀನುಗಳನ್ನೂ ಬಿಟ್ಟಿಲ್ಲ. ಜನರು ವಾಸಿಸುವ ಮನೆ ಮತ್ತು ಮಠ, ದೇವಾಲಯಗಳನ್ನೂ ಸಹ ಬಿಟ್ಟಿಲ್ಲ ಎಂದು ಶಿಗ್ಗಾಂವಿ ಮತ್ತು ಸವಣೂರು ಪಟ್ಟಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದರು.