ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಆರಂಭವಾಗಿರುವ ಚಳಿಗಾಲದ ಅಧಿವೇಶನದ ಮೊದಲ ದಿನವೇ 11 ಪ್ರತಿಭಟನೆಗಳು ನಡೆದಿವೆ. ಸುವರ್ಣ ಗಾರ್ಡನ್ ಮತ್ತು ಕೊಂಡಸಕೊಪ್ಪ ಟೆಂಟ್ನಲ್ಲಿ ರೈತರು, ಸಾರಿಗೆ ನೌಕರರು, ವಿದ್ಯಾರ್ಥಿಗಳು ಸೇರಿ ವಿವಿಧ ಸಂಘ-ಸಂಸ್ಥೆಗಳು ತಮ್ಮ ಹಕ್ಕಿಗಾಗಿ ಪ್ರತಿಭಟಿಸಿದರು.
ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದೂ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪ್ರತಿಭಟಿಸಿದರೆ, ಗ್ರಂಥಾಲಯ ಮೇಲ್ವಿಚಾರಕನನ್ನು ಖಾಯಂ ಗೊಳಿಸುವಂತೆ ರಾಜ್ಯ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಬಿಬಿಎಂಪಿ, ಗ್ರಂಥಾಲಯ ಮೇಲ್ವಿಚಾರಕರ ಸಂಘ ಧರಣಿ ನಡೆಸಿತು. ಇನ್ನು ಮ್ಯಾನೇಜ್‌ಮೆಂಟ್ ಕೋಟಾದಡಿ ಪ್ರವೇಶಾತಿ ಪಡೆದುಕೊಂಡಿರುವ, ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಎಸ್ಸಿ, ಎಸ್ಟಿ, ಒಬಿಸಿ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ವಸತಿ ನಿಲಯಗಳಲ್ಲಿ ಮೀಸಲಾತಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿರುವುದನ್ನು ಪುನಃ ಜಾರಿಗೊಳಿಸುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಸಚಿವ ದಿನೇಶ್ ಗುಂಡೂರಾವ್ (ETV Bharat) ಅದೇ ರೀತಿ, ಗಗದ ಜಿಲ್ಲೆಯ ಮುಂಡರಗಿ ತಾಲೂಕಿನ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡದಂತೆ ಆಗ್ರಹಿಸಿ ಅಕ್ಕಾ ಫೌಂಡೇಶನ್ ಪ್ರತಿಭಟನೆ ನಡೆಸಿತು. ಹೂಗಾರ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಘೋಷಿಸುವಂತೆ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘ ಒತ್ತಾಯಿಸಿತು. ಸಾರಿಗೆ ನೌಕರರು ಹೆಚ್ಚುವರಿ ಭತ್ಯೆ, ಹುಬ್ಬಳ್ಳಿ ವಾರ್ಡ್ ಸಮಿತಿಯವರು ವಾರ್ಡ್ ಸಮಿತಿ ರಚನೆಗೆ ಬೇಡಿಕೆ ಮುಂದಿಟ್ಟುಕೊಂಡು ಧರಣಿ ನಡೆಸಿದರು.
ವಿದ್ಯಾರ್ಥಿಗಳಾದ ಸಿದ್ರಾಮಪ್ಪ ದೇಮಟ್ಟಿ ಮತ್ತು ಗಾಯತ್ರಿ ಹಲಗಿ 'ಈಟಿವಿ ಭಾರತ್' ಜೊತೆ ಮಾತನಾಡಿ, "ಖಾಸಗಿ ಕಾಲೇಜಿನಲ್ಲಿ ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಬರುವ ವಿದ್ಯಾರ್ಥಿ ವೇತನ, ವಸತಿ ನಿಲಯ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಈ ಆದೇಶ ಹಿಂಪಡೆಯಬೇಕು. ಕೆಲವೊಂದು ವಿದ್ಯಾರ್ಥಿಗಳು ಸಾಲ ಮಾಡಿ ಪ್ರವೇಶ ಪಡೆದಿರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊಡದೇ ಅನ್ಯಾಯ ಮಾಡಲಾಗುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಗಾರರಿಂದ ಮನವಿ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ದಿನೇಶ ಗುಂಡೂರಾವ್, "ಖಾನಾಪುರ ರೈತ ಸಂಘಟನೆ ಕೆಲವು ಸಮಸ್ಯೆಗಳ ಪ್ರಸ್ತಾಪ ಮಾಡಿದ್ದಾರೆ. ಮಹದಾಯಿ, ಕಳಸಾ ಬಂಡೂರಿ ಯೋಜನೆಗಳನ್ನೂ ಅತಿ ಶೀಘ್ರದಲ್ಲಿ ಮಾಡಬೇಕು. ರೈಲು ಯೋಜನೆ ಕೆಲವು ಮಾರ್ಪಾಡು ಮಾಡವ ಕುರಿತು ಮನವಿ ಸ್ವೀಕರಿಸಿದ್ದೇನೆ. ಕೆಎಸ್ಆರ್ಟಿಸಿ ನೌಕರರ ಕೆಲವು ಬೇಡಿಕೆಗಳ ಮನವಿ ಪಡೆದಿದ್ದೇನೆ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ" ಎಂದರು.
"ಯರಗಟ್ಟಿ, ಮೂಡಲಗಿ ಹೊಸ ತಾಲೂಕುಗಳ ಕಾಮಗಾರಿ ಕುರಿತು ವಿವಿಧ ಸಂಘಟನೆಗಳು ಬೇಡಿಕೆ ಇಟ್ಟಿದ್ದು, ಹೂಗಾರ ಸಮಾಜ ತಮ್ಮನ್ನು ಎಸ್ಟಿಗೆ ಸೇರಿಸುವಂತೆ ಆಗ್ರಹಿಸಿದೆ. ರೈತ ಸಂಘ ಕೂಡ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿದೆ. ಮುಖ್ಯಮಂತ್ರಿಗಳು ಎಲ್ಲ ಬೇಡಿಕೆಗಳ ಮಾಹಿತಿ ಕೊಡಿ ಎಂದಿದ್ದು, ರಾತ್ರಿ ವೇಳೆ ಭೇಟಿಯಾಗಿ ನೀಡಿ ಎಲ್ಲ ಮಾಹಿತಿ ತಿಳಿಸುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ:ಬೆಳಗಾವಿ: ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಹೂಗಾರ ಸಮಾಜ ಪ್ರತಿಭಟನೆ