ಬೆಂಗಳೂರು:KAS ಅಧಿಕಾರಿಗಳ ಜೇಷ್ಠತಾ ಪಟ್ಟಿ ಸಿದ್ಧವಿದ್ದು, ಮುಂದಿನ 10 ದಿನಗಳ ಒಳಗಾಗಿ ಬಿಡುಗಡೆ ಆಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ ಹೊರತಂದಿರುವ ಕ್ಯಾಲೆಂಡರ್ ಮತ್ತು ದಿನಚರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, KAS ಅಧಿಕಾರಿಗಳ ಜೇಷ್ಠತಾ ಪಟ್ಟಿ ಸಿದ್ಧವಿದೆ. ಮುಂದಿನ 10 ದಿನಗಳ ಒಳಗಾಗಿ ಬಿಡುಗಡೆ ಆಗುತ್ತದೆ. ಕೆಎಎಸ್ ಅಧಿಕಾರಿಗಳ ಬಡ್ತಿ ಬೇಡಿಕೆಯನ್ನೂ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ ಹೊರತಂದಿರುವ ಕ್ಯಾಲೆಂಡರ್ ಮತ್ತು ದಿನಚರಿ ಬಿಡುಗಡೆಗೊಳಿಸಿ ಸಿಎಂ ಮಾತನಾಡಿದರು. (ETV Bharat) ನಮಗೆ ಸಿಕ್ಕಿರುವ ವಿದ್ಯೆ ಮತ್ತು ಅವಕಾಶಗಳ ಹಿಂದೆ ಸಮಾಜದ ಋಣ ಇದೆ. ಈ ಋಣ ತೀರಿಸುವುದು ನಮ್ಮ ಜವಾಬ್ದಾರಿ. ಎರಡು ಹೊತ್ತಿನ ಊಟಕ್ಕೂ ಶ್ರಮಿಸುತ್ತಿರುವ ಕಟ್ಟಕಡೆಯ ಜನರ ಪರವಾಗಿ ನಿಮ್ಮ ಬದ್ಧತೆ ತೋರಿಸಿ ಎಂದು ಸಿಎಂ ಸೂಚಿಸಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ ಮಾಡಿರುವ ಭಾಷಣವನ್ನು ನೀವೆಲ್ಲಾ ಓದಬೇಕು. ಐತಿಹಾಸಿಕ ಕಾರಣಗಳಿಂದಾಗಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ. ಇದನ್ನು ಹೋಗಲಾಡಿಸಬೇಕು ಎನ್ನುವುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಈ ಆಶಯ ಈಡೇರಿಸಲು ನಾವು ನಮಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದರು.
ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ ಹೊರತಂದಿರುವ ಕ್ಯಾಲೆಂಡರ್ ಮತ್ತು ದಿನಚರಿ ಬಿಡುಗಡೆಗೊಳಿಸಿ ಸಿಎಂ ಮಾತನಾಡಿದರು. (ETV Bharat) ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ಮೊದಲ ಬಾರಿ ಸಿಎಂ ಆಗಿ ಹಲವಾರು ಭಾಗ್ಯಗಳು, ಈ ಬಾರಿ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿ ಆಹಾರ, ಶಿಕ್ಷಣ, ಮಾಹಿತಿ ಹಕ್ಕುಗಳನ್ನು ಮಾಡುವ ಮೂಲಕ ಸಂವಿಧಾನದ ನಿರ್ದೇಶಕ ತತ್ವಗಳನ್ನು ಜನರ ಹಕ್ಕುಳನ್ನಾಗಿ ಮಾಡಿದರು. ಇವೆಲ್ಲವೂ ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವ ಉದ್ದೇಶವನ್ನೇ ಹೊಂದಿವೆ. ಆದ್ದರಿಂದ ಮಧ್ಯವರ್ತಿಗಳೇ ಇಲ್ಲದ ನಮ್ಮ ಗ್ಯಾರಂಟಿಗಳನ್ನು ಮನೆ ಮನೆ ತಲುಪಿಸಿ ಎಂದರು.
ಅಂಬೇಡ್ಕರ್ ಅವರಿಂದ ಬುದ್ಧ, ಬಸವ, ಗಾಂಧಿ ಎಲ್ಲರೂ ಸಮಾಜದ ಸಮಾನತೆಗಾಗಿ, ತಾರತಮ್ಯದ ಸಮಾಜದ ಬದಲಾವಣೆಗಾಗಿ ಶ್ರಮಿಸಿದರು. ಆದರೂ ಇನ್ನೂ ಅಸಮಾನತೆ ಹೋಗಿಲ್ಲ ಎಂದರೆ ಎಲ್ಲರಿಗೂ ಸಮಾನ ಅವಕಾಶ ಸಿಗದೇ ಇರುವುದೇ ಮುಖ್ಯ ಕಾರಣ. ಆದ್ದರಿಂದ ಸಮಾಜದಲ್ಲಿ ಪಟ್ಟಭದ್ರರು ಇನ್ನೂ ಹೆಚ್ಚಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸೂಟು ಬೂಟು ಹಾಕಿಕೊಂಡು ಬರುವವರನ್ನು ಕುರ್ಚಿಯಲ್ಲಿ ಕೂರಿಸಿ ಮಾತನಾಡಿಸುವುದನ್ನು, ಮಾಸಲು ಬಟ್ಟೆಯಲ್ಲಿ ಬರುವ ಬಡವರನ್ನು ನಿರ್ಲಕ್ಷ್ಯದಿಂದ ಕಾಣುವುದು ನಮ್ಮ ಮಾನಸಿಕ ಗುಲಾಮಗಿರಿಯ ಧ್ಯೋತಕ. ಇದನ್ನು ಕಿತ್ತೊಗೆದು ಪ್ರತಿಯೊಬ್ಬರಿಗೂ ಸಮಾಜದಲ್ಲಿ ಅವಕಾಶಗಳು ಸಿಗುವಂತೆ ನೋಡಿಕೊಳ್ಳಿ ಎಂದು ಕರೆ ನೀಡಿದರು.
ಎಲ್ಲಿಯವರೆಗೂ ಜಾತಿ, ವರ್ಗ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೂ ಅಸಮಾನತೆ ಇರುತ್ತದೆ. ಕೆಎಎಸ್ ಅಧಿಕಾರಿಗಳ ಸಂಘ ಮುಂದಿಟ್ಟಿರುವ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕೆಎಎಸ್ ಅಧಿಕಾರಿಗಳ ಸಂಖ್ಯೆ ಹೆಚ್ಚಿಸಲು ನಾವು ಸಿದ್ಧರಿದ್ದೇವೆ. ಆದರೆ ಸಂಖ್ಯೆ ಮುಖ್ಯವಲ್ಲ. ನಿಮ್ಮ ಗುಣಾತ್ಮಕ ಕರ್ತವ್ಯ, ಸೇವೆ ಮುಖ್ಯ ಎಂದರು.
ಇದನ್ನೂ ಓದಿ:ಜಾತಿ ಗಣತಿ ವರದಿ ಕುರಿತು ಆದಷ್ಟು ಬೇಗ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ: ಸಚಿವ ಸಂಪುಟ ಸಭೆಯಲ್ಲಿ ಸಿಎಂ - CM SIDDARAMAIAH ON CASTE CENSUS