ಶಿಲ್ಪಿ ಅರುಣ್ ಯೋಗಿರಾಜ್ ತಾಯಿ ಸರಸ್ವತಿ ಅವರು ಮಾತನಾಡಿದರು ಮೈಸೂರು : ಅಯೋಧ್ಯೆಯಲ್ಲಿ ಇಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದ ಶಿಲ್ಪಿ ಅರುಣ್ ಯೋಗಿರಾಜ್ ತಾಯಿ ಹಾಗೂ ಪತ್ನಿ ವಿಜೇತಾ ಅವರು ಈಟಿವಿ ಭಾರತ್ ಜೊತೆ ಬಾಲರಾಮನ ಬಗ್ಗೆ ಮಾತನಾಡಿದ್ದು, ಅವರ ಸಂದರ್ಶನದ ಭಾಗ ಇಲ್ಲಿದೆ.
ಅಯೋಧ್ಯೆಯಲ್ಲಿ ಇಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಈ ಕಾರ್ಯಕ್ರಮವನ್ನು ಮೈಸೂರು ನಗರದ ಎಲ್ಲ ಕಡೆ ದೊಡ್ಡ ದೊಡ್ಡ ಪರದೆಯ ಮೂಲಕ ಜನರು ವೀಕ್ಷಣೆ ಮಾಡಿದ್ದಾರೆ. ಬಾಲರಾಮನ ವಿಗ್ರಹ ಕೆತ್ತನೆ ಮಾಡಿದ ಶಿಲ್ಪಿ ಅರುಣ್ ಯೋಗಿರಾಜ್ ಮನೆಯಲ್ಲಿ ಅವರ ಕುಟುಂಬದವರು ಹಾಗೂ ಬಂಧು ಬಾಂಧವರು ಟಿವಿ ಮೂಲಕ ಮನೆಯಲ್ಲೇ ಪ್ರತಿಷ್ಠಾಪನೆಯನ್ನು ವೀಕ್ಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮನೆಗೆ ಬಂದ ಅತಿಥಿಗಳಿಗೆ ಸಿಹಿ ತಿಂಡಿಯನ್ನು ಸಹ ವಿತರಿಸಿ ಸಂಭ್ರಮಪಟ್ಟರು.
ಶಿಲ್ಪಿ ಅರುಣ್ ಯೋಗಿರಾಜ್ ಕುಟುಂಬಸ್ಥರು ಶಿಲ್ಪಿ ಅರುಣ್ ಯೋಗಿರಾಜ್ ತಾಯಿ ಸರಸ್ವತಿ ಹೇಳಿದ್ದೇನು? :ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನೋಡಿ ತುಂಬಾನೇ ಖುಷಿಯಾಯಿತು. ಇಡೀ ನಮ್ಮ ಕುಟುಂಬದವರೆಲ್ಲ ಹಬ್ಬದ ರೀತಿಯಲ್ಲಿ ಖುಷಿ ಪಟ್ಟೆವು. ಬಾಲರಾಮ ಮೂರ್ತಿಯನ್ನು ಮಗ ಚೆನ್ನಾಗಿ ಕೆತ್ತಿದ್ದಾನೆ. ಇಲ್ಲಿಯವರೆಗೆ ನಮಗೆ ಮೂರ್ತಿ ತೋರಿಸಿರಲಿಲ್ಲ. ಇಂದು ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಬಾಲರಾಮನ ಮೂರ್ತಿ ನೋಡಿ ತುಂಬಾ ಖುಷಿಯಾಯಿತು. ಬಾಲರಾಮ ಮೂರ್ತಿ ಮಗು ಎದ್ದು ಬಂದ ಹಾಗೆ ಇದೆ. ಈ ಸಂದರ್ಭದಲ್ಲಿ ಅರುಣ್ ತಂದೆ ಇದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು. ನನಗೂ ಸಹ ನೋವಾಗುತ್ತಿದೆ. ಸಂತೋಷದ ಜೊತೆಗೆ ದುಃಖವೂ ಇದೆ. ಆದರೂ ಮಗನ ಸಾಧನೆ ಹೆಮ್ಮೆ ಅನಿಸುತ್ತದೆ. ಅವನು ಬಂದ ಮೇಲೆ ಎಲ್ಲರೂ ಒಟ್ಟಾಗಿ ಅಯೋಧ್ಯೆಗೆ ಹೋಗುತ್ತೇವೆ ಎಂದು ತಾಯಿ ಸರಸ್ವತಿ ಈಟಿವಿ ಭಾರತ್ ಜೊತೆ ಮಾತನಾಡಿ, ತಮ್ಮ ಸಂತೋಷವನ್ನು ಹಂಚಿಕೊಂಡರು.
ಪತ್ನಿ ವಿಜೇತ ಅರುಣ್ ಯೋಗಿರಾಜ್ ಹೇಳಿದ್ದೇನು ? : ಬಾಲರಾಮ ಮೂರ್ತಿ ನೋಡಿದ ಮೇಲೆ ತುಂಬಾ ಖುಷಿಯಾಯಿತು. ದೇವರನ್ನು ನೋಡಿದ ರೀತಿಯಲ್ಲಿ ಕಾಣಿಸುತ್ತದೆ ಹಾಗೂ ಅರುಣ್ ಯೋಗಿರಾಜ್ ಚಿಕ್ಕ ಮಗನೇ ಅಲ್ಲಿ ಹೋಗಿ ನಿಂತಿರುವ ಹಾಗೆ ಕಾಣಿಸುತ್ತದೆ. ಅದ್ಭುತವಾಗಿ ಬಾಲರಾಮ ಮೂಡಿ ಬಂದಿದ್ದಾರೆ. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇವೆ. 500 ವರ್ಷಗಳಿಂದ ಜನರೆಲ್ಲ ಕಾತರದಿಂದ ಕಾಯುತ್ತಿದ್ದ ಕ್ಷಣ ಇದು. ಇವತ್ತು ನನಸಾಗಿದೆ. ಇದರಲ್ಲಿ ನಾವು ಭಾಗಿಯಾಗಿರುವುದು ನಮ್ಮ ಭಾಗ್ಯ ಎಂದು ಅರುಣ್ ಯೋಗಿರಾಜ್ ಪತ್ನಿ ವಿಜೇತ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ :ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಹರಿದು ಬಂದ ಅಭಿನಂದನೆಗಳ ಮಹಾಪೂರ