ಚಿಕ್ಕೋಡಿ:''ಅಥಣಿ ಶಾಸಕ ಲಕ್ಷ್ಮಣ್ ಸವದಿ ಮತ್ತೆ ಬಿಜೆಪಿಗೆ ಬರುತ್ತಾರೆ ಎಂಬುದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ರಾಷ್ಟ್ರೀಯ ಪಕ್ಷಕ್ಕೆ ಓರ್ವ ವ್ಯಕ್ತಿ ಅನಿವಾರ್ಯವಲ್ಲ. ಸವದಿ ಸ್ವಾಭಿಮಾನ ಬಿಟ್ಟು ಬಿಜೆಪಿ ಬರುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಅವರು ಕಾಂಗ್ರೆಸ್ ಪಕ್ಷದಲ್ಲಿ ಮಂತ್ರಿ ಸ್ಥಾನವನ್ನು ಪಡೆದುಕೊಳ್ಳುವುದಕ್ಕೆ ಗದ್ದಲ ಎಬ್ಬಿಸಿ ಆಟವಾಡುತ್ತಿದ್ದಾರೆ'' ಎಂದು ಅಥಣಿ ಮಾಜಿ ಶಾಸಕ ಮಹೇಶ್ ಕುಮಠಳ್ಳಿ ವ್ಯಂಗ್ಯವಾಡಿದ್ದಾರೆ.
ಅಥಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸವದಿ ಅವರು ಹಿಂದೆ ಬಿಜೆಪಿಯಲ್ಲಿ ಇದ್ದವರು. ಪಕ್ಷ ಬಿಡುವಾಗ ಅವರು ಬಿಜೆಪಿ ಬಗ್ಗೆ ಹಲವು ಮಾತುಗಳನ್ನು ಆಡಿದ್ದಾರೆ. ನಾನು ಸತ್ತರೂ ಬಿಜೆಪಿ ಕಚೇರಿ ಮುಂದೆ ನನ್ನ ಹೆಣವನ್ನು ತೆಗೆದುಕೊಂಡು ಹೋಗಬೇಡಿ ಎಂದು ಸವದಿ ಹೇಳಿಕೆ ನೀಡಿದ್ದರು. ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂದು ಪಕ್ಷ ಬಿಟ್ಟಿದ್ದರು. ಸದ್ಯಕ್ಕೆ ಸ್ವಾಭಿಮಾನ ಬಿಟ್ಟು ಮರಳಿ ಬಿಜೆಪಿಗೆ ಬರುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಸವದಿಯವರನ್ನು ನೀವು ಕೇಳಬೇಕು'' ಎಂದು ಕಿಡಿಕಾರಿದರು.
''ಶಾಸಕ ಲಕ್ಷ್ಮಣ್ ಸವದಿ ಹಿಂದೆ ಬಿಜೆಪಿಯನ್ನು ಬೈದಿದ್ದರು. ತಾಯಿ, ವಿಷ, ಸ್ವಾಭಿಮಾನ, ನನ್ನ ಹೆಣವು ಕೂಡ ಕಚೇರಿ ಮುಂದೆ ಹಾಯಬಾರದು ಅಂತ ಹಲವು ಮಾತುಗಳನ್ನು ಆಡಿದ್ದರು. ಸವದಿ ಮಾತುಗಳನ್ನು ಮರೆತು ಬಿಜೆಪಿ ವರಿಷ್ಠರು ದೊಡ್ಡ ಮನಸ್ಸು ಮಾಡಿ ಕರೆಯಬಹುದು. ಅವರು ಸ್ವಾಭಿಮಾನ ಬಿಟ್ಟು ಬರುತ್ತಾರಾ? ಎಂಬುದನ್ನು ನೀವು ಅವರನ್ನು ಕೇಳಬೇಕು. ಸವದಿ ಬಿಜೆಪಿಗೆ ಮರಳುವುದು ನಮಗೆ ಗೊತ್ತಿಲ್ಲ. ಆದರೆ, ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧರಾಗಿರುತ್ತೇವೆ'' ಎಂದರು.