ಮೈಸೂರು: ಮೈಸೂರು ತಾಲೂಕಿನ ವ್ಯಾಪ್ತಿಯಲ್ಲಿ ಸುಮಾರು 15 ವರ್ಷಗಳ ಹಿಂದೆ ನಿಂತು ಹೋಗಿದ್ದ, ಶನಿವಾರ ಸಂತೆ ಈಗ ಮತ್ತೆ ಪುನರಾರಂಭವಾಗಲಿದೆ. ಈ ಮೂಲಕ ಕುರಿ, ಮೇಕೆ ಹಾಗೂ ಜಾನುವಾರಗಳ ಮಾರಾಟ ಹಾಗೂ ಖರೀದಿಗೆ ಬೇರೆ ಬೇರೆ ತಾಲೂಕಿಗೆ ತೆರಳುತಿದ್ದ ಕುರಿಗಾಹಿಗಳು ಹಾಗೂ ಗ್ರಾಹಕರು ಹತ್ತಿರದ ಸ್ಥಳದಲ್ಲಿಯೇ ಭೇಟಿಯಾಗಿ, ವ್ಯಾಪಾರ ವಾಹಿವಾಟು ಮಾಡಲಿದ್ದಾರೆ.
ಮಹದೇಶ್ವರ ಕುರಿ ಮತ್ತು ಉಣ್ಣೆ ಉತ್ಪನ್ನ ಸಹಕಾರ ಸಂಘದ ಸದಸ್ಯರು ಹಾಗೂ ಸ್ಥಳೀಯ ರೈತರ ಒತ್ತಾಯದ ಮೇರೆಗೆ ಕೃಷಿ ಮಾರಾಟ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ, ಬಂಡಿಪಾಳ್ಯ), ಕಡಕೋಳದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ 1 ಎಕರೆ ಪ್ರದೇಶದಲ್ಲಿ ಸುಸಜ್ಜಿತವಾದ ಕುರಿ, ಮೇಕೆ ಮತ್ತು ಜಾನುವಾರಗಳ ಉಪ ಮಾರುಕಟ್ಟೆ ಪ್ರಾಂಗಣ ತೆರೆಯುವ ಮೂಲಕ ನಿಂತು ಹೋಗಿದ್ದ ಶನಿವಾರ ಸಂತೆಗೆ ಮರುಜೀವ ನೀಡಿದೆ.
ಇದೇ ಸ್ಥಳದಲ್ಲಿ 50 ವರ್ಷಗಳಿಂದ ಶನಿವಾರ ಸಂತೆ ನಡೆಯುತ್ತಿತ್ತು. ಮೈಸೂರಿನ ನಂಜನಗೂಡು, ಹುಣಸೂರು, ಪಿರಿಯಾಪಟ್ಟಣ, ತಿ.ನರಸೀಪುರ, ಎಚ್.ಡಿ.ಕೋಟೆ, ಕೆ.ಆರ್.ನಗರ ತಾಲೂಕು ಸೇರಿದಂತೆ ಸುತ್ತಮುತ್ತ ಜಿಲ್ಲೆಗಳಿಂದ ಕುರಿ, ಮೇಕೆ ಹಾಗೂ ಜಾನುವಾರು ಮಾರಾಟ ಹಾಗೂ ಖರೀದಿ ಇಲ್ಲಿ ನಡೆಯುತ್ತಿತ್ತು. ಆದರೆ, 15 ವರ್ಷಗಳ ಹಿಂದೆ ಇಲ್ಲಿ ನಡೆಯುತ್ತಿದ್ದ ವ್ಯಾಪಾರ ಏಕಾಏಕಿ ನಿಂತು ಹೋಯಿತು.
ಮೈಸೂರು ತಾಲೂಕಿನ ಕುರಿಗಾಹಿಗಳು ಹಾಗೂ ಕುರಿ, ಮೇಕೆ, ಜಾನುವಾರುಗಳನ್ನು ಖರೀದಿ ಮಾಡಲು ಬೇರೆ ಬೇರೆ ತಾಲೂಕುಗಳಲ್ಲಿ ನಡೆಯುತ್ತಿದ್ದ ಶನಿವಾರ ಸಂತೆ ತೆರಳುತ್ತಿದ್ದ ಗ್ರಾಹಕರಿಗೆ ಇದು ತುಂಬಾ ಅನುಕೂಲವಾಗಿದೆ. ಕಡಕೋಳದಲ್ಲಿ ಕೈಗಾರಿಕಾ ಪ್ರದೇಶದ ಜೊತೆಯಲ್ಲಿ ಇನ್ನು ಹಳ್ಳಿಯ ವಾತಾವರಣ ಇರುವುದರಿಂದ ಕುರಿ, ಮೇಕೆ ಸಾಕಾಣೆ ಮಾಡುತ್ತಿದ್ದ ಸ್ಥಳೀಯರಿಗೂ ಅನುಕೂಲವಾಗಿದೆ.