ಬೆಳಗಾವಿ: "ನಾವು ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದು ಅದು ಕೂಡ ಒಂದು ಸಾಧನೆಯಾಗಿದೆ. ಸುಮಾರು 56-60 ಸಾವಿರ ಕೋಟಿ ಹಣವನ್ನು ಜನರಿಗೆ ಗ್ಯಾರಂಟಿ ನೀಡುತ್ತಿರುವುದು, ಇದು ಸಹ ಒಂದು ರೀತಿಯಲ್ಲಿ ಅಭಿವೃದ್ಧಿಯೇ ಆಗಿದೆ" ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಮರ್ಥಿಸಿಕೊಂಡರು.
ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಮ್ಮ ಗ್ಯಾರಂಟಿ ಯೋಜನೆಗಳೂ ಸಹ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿವೆ. ವಿರೋಧ ಪಕ್ಷಗಳು ಅಧಿಕಾರದಲ್ಲಿದ್ದಾಗ ಅಭಿವೃದ್ಧಿಗಾಗಿ ಎಷ್ಟು ಹಣಕೊಟ್ಟಿದ್ದಾರೆ ಅನ್ನೋದನ್ನು ಇಲಾಖಾವಾರು ಸಚಿವರು ಉತ್ತರ ಕೊಟ್ಟೇ ಕೊಡುತ್ತಾರೆ. 1ಲಕ್ಷ 20 ಸಾವಿರ ಕೋಟಿಗಿಂತಲೂ ಅಧಿಕ ಹಣವನ್ನು ರಾಜ್ಯದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದೇವೆ" ಎಂದು ತಿಳಿಸಿದರು.
ಸಚಿವ ಸಂತೋಷ್ ಲಾಡ್ ಮಾಧ್ಯಮ ಪ್ರತಿಕ್ರಿಯೆ. (ETV Bharat) "ಕೇಂದ್ರ ಸರ್ಕಾರದಲ್ಲಿ ಅದಾನಿ ಬಹುಕೋಟಿ ವಂಚನೆ ಪ್ರಕರಣ ಮುಚ್ಚಿಹಾಕಲು ಒನ್ ನೇಷನ್, ಒನ್ ಎಲೆಕ್ಷನ್ ಪ್ರಾರಂಭಿಸಲಾಗಿದೆ" ಎಂದು ಆರೋಪಿಸಿದ ಲಾಡ್ "ಅದಾನಿ ವಂಚನೆಯ ಪ್ರಕರಣವು ಭಾರತದಲ್ಲಿಯೇ ನಡೆದಿದೆ. ಅಮೆರಿಕ ಮೂಲದ ಕಂಪನಿಗಳ ಜೊತೆ ಭಾರತದಲ್ಲಿ ವ್ಯವಹಾರ ಮಾಡಿರುವುದಕ್ಕೆ ಹೀಗೆ ಆಗಿದೆ. ಈ ರೀತಿಯ ಪ್ರಕರಣಗಳನ್ನು ಮುಚ್ಚಿ ಹಾಕುವ ಸಲುವಾಗಿ ಒನ್ ನೇಷನ್ ಒನ್ ಎಲೆಕ್ಷನ್ ಪ್ರಾರಂಭಿಸಿದ್ದಾರೆ" ಎಂದು ಟೀಕಿಸಿದರು.
"ಇತ್ತೀಚಿಗೆ ಅದಾನಿ ಕಂಪನಿಯವರು ಸೆಬಿ ಬಳಿ ಸೆಟ್ಲಮೆಂಟ್ಗೆ ಹೋಗಿದ್ದಾರೆ. ಇದರ ಅರ್ಥ ಏನು?. ಸೆಬಿಯಲ್ಲಿನ ಹಗರಣ ಅದಾನಿಯವರಿಗೆ ಸಂಬಂಧಿಸಿರುವುದಾಗಿದೆ. ಅದಕ್ಕಾಗಿ ಈ ಎಲ್ಲ ವಿಚಾರಗಳನ್ನು ಮುಚ್ಚಿಹಾಕಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
ಬೆಳಗಾವಿ ಅಧಿವೇಶನ ತೃಪ್ತಿ ತಂದಿಲ್ಲ- ಛಲವಾದಿ ನಾರಾಯಣಸ್ವಾಮಿ: "ಬೆಳಗಾವಿ ಚಳಿಗಾಲದ ಅಧಿವೇಶನ ನಮಗೆ ತೃಪ್ತಿ ತಂದಿಲ್ಲ" ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ಸರ್ಕಾರ ವಿರುದ್ಧ ಕುಟುಕಿದರು. ಅವರು ಬೆಳಗಾವಿ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, "ಅಧಿವೇಶನದಲ್ಲಿ ಉತ್ತರ ಕರ್ನಾಟಕ ಕುರಿತು ಚರ್ಚೆ ಆಗಬೇಕಿತ್ತು. ಆದರೆ ಭ್ರಷ್ಟಾಚಾರ ತೇಪೆ ಹಚ್ಚುವ ಹಾಗೂ ಅದನ್ನು
ಮುಚ್ಚಿಕೊಳ್ಳುವ ಕೆಲಸ ಮಾಡಿದರು. ಸಮಸ್ಯೆ ಬಗ್ಗೆ ಚರ್ಚೆ ಆಗಲಿಲ್ಲ, ಕಿತ್ತೂರು ಕರ್ನಾಟಕ ಸಮಗ್ರ ಕರ್ನಾಟಕ ಕುರಿತು ಚರ್ಚೆ ಮಾಡಲಿಲ್ಲ, ಚಳಿಗಾಲದ ಅಧಿವೇಶನ ತೃಪ್ತಿ ತಂದಿಲ್ಲ".
ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (ETV Bharat) "ಕೆಐಡಿಬಿಯಲ್ಲಿ ಭ್ರಷ್ಟಾಚಾರ ಆಗಿದೆ ಅದನ್ನು ತನಿಖೆ ಮಾಡುತ್ತಿಲ್ಲ. ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಬೇಕಾದವರಿಗೆ ಸೈಟ್ ಹಂಚಿಕೆ ಮಾಡಿದ್ದಾರೆ. ಖಾಲಿ ಜಾಗ ಅವರ ಬುಟ್ಟಿಗೆ ಹಾಕಿದ್ದಾರೆ. ರಾಯಚೂರು ಥರ್ಮಲ್ ಪವರ್ ಪ್ಲಾಂಟ್ ಬಣ್ಣ ಬಳಿಯಲು 120 ಕೋಟಿ ರೂಪಾಯಿ ನಿಗದಿ ಮಾಡಿದ್ದಾರೆ. ಥರ್ಮಲ್ ಪವರ್ ಪ್ಲಾಂಟ್ಗೆ ಬಣ್ಣ ಮಾಡೋಕೆ 120 ಕೋಟಿ ರೂಪಾಯಿ ಬೇಕಾ?. ವಾಲ್ಮೀಕಿ, ಮುಡಾ ಹಗರಣ ಹಾಗೂ ಇತರ ಹಗರಣ ಮುಚ್ಚಿಕೊಳ್ಳಲು ಸರ್ಕಾರ ಮುಂದಾಗಿದೆ".
"ನಾನು, ರಾಜ್ಯದ ಜನರ ಕ್ಷಮೆ ಕೋರುವೆ. ಎಷ್ಟೇ ಕೇಳಿದರೂ ಸರ್ಕಾರ ಚರ್ಚೆ ಮಾಡಲು ತಯಾರಿಲ್ಲ. ಗ್ಯಾರಂಟಿ ಬಿಟ್ಟು ಸರ್ಕಾರದ ಬಳಿ ಬೇರೆ ಮಾತಿಲ್ಲ. ಗ್ಯಾರಂಟಿಗಳೇ ಪರ್ಮಮನೆಂಟ್ ಅಲ್ಲ. ಇಷ್ಟು ದಿನ ಜನರು ಉಪವಾಸ ಇದ್ದರಾ. ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿ ಮಾಡಬೇಕು
ಗ್ಯಾರಂಟಿಯಲ್ಲೇ ಸರ್ಕಾರ ಮುಗಿದರೆ ಹೇಗೆ" ಎಂದು ವಾಗ್ದಾಳಿ ನಡೆಸಿದರು. "ರೈತರ ಸಮಸ್ಯೆಗಳಿವೆ. ನೀರಾವರಿ ಯೋಜನೆಗಳ ಹಾಗೂ ಇತರೆ ಸಮಸ್ಯೆಗಳಿವೆ ಅಭಿವೃದ್ಧಿಗಳಿಗಾಗಿ ಸರ್ಕಾರ ಈಗ ಹಣ ನೀಡಬೇಕು" ಎಂದು ಒತ್ತಾಯಿಸಿದರು.
ಕೊನೆಗೆ, ಮಾಜಿ ಸಿಎಂ ಯಡಿಯೂರಪ್ಪ ಅವರ ಜನ್ಮ ದಿನಾಚರಣೆ ಹೆಸರಲ್ಲಿ ಯಡಿಯೂರಪ್ಪೋತ್ಸವ ಆಚರಣೆ ವಿಚಾರಕ್ಕೆ "ಜನ್ಮ ದಿನಾಚರಣೆ ಅವರಿಗೆ ಸಂಬಂಧಿಸಿದ್ದು. ಅಭಿಮಾನಿಗಳು ಮಾಡಿದರೆ ಮಾಡಲಿ. ಅದು ಅವರ ಇಚ್ಛೆ. ಇದು ಬಲ ಪ್ರದರ್ಶನ ಅಲ್ಲ" ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ:ಗೃಹಲಕ್ಷ್ಮಿ ಫಲಾನುಭವಿಗಳ ಜೊತೆಗೆ ಬೆಳಗಾವಿಯ ಸುವರ್ಣ ಸೌಧಕ್ಕೆ ಬಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್