ಬಳ್ಳಾರಿ: ಸಂಡೂರು ವಿಧಾನಸಭೆ ಕ್ಷೇತ್ರದ 253 ಮತಗಟ್ಟೆಗಳಲ್ಲಿ ಮತದಾನ ಶಾಂತಿಯುತವಾಗಿ ಜರುಗಿದ್ದು, ಶೇ.76.24 ರಷ್ಟು ಮತದಾನವಾಗಿದೆ.
ಸಂಡೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2,36,402 ಮತದಾರರಿದ್ದು, ಆ ಪೈಕಿ 1,80,189 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. 1,17,935 ಪುರುಷ ಮತದಾರರಲ್ಲಿ 90,922 ಪುರುಷರು, 1,18,438 ಮಹಿಳಾ ಮತದಾರರಲ್ಲಿ 89,252 ಮಹಿಳೆಯರು ಮತದಾನ ಮಾಡಿದ್ದಾರೆ ಮತ್ತು 29 ಇತರೆ ಮತದಾರರ ಪೈಕಿ 12 ಮಂದಿ ಮತದಾನ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.
ಸಂಡೂರು ಪಟ್ಟಣ, ಕುಡತಿನಿ, ತೋರಣಗಲ್ಲು ಮತ್ತು ವಡ್ಡು ಗ್ರಾಮಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಕುಡತಿನಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದೇ ಕಡೆ ಇರುವ 186, 187, 188 ಮತ್ತು 189 ಮತಗಟ್ಟೆ ಕೇಂದ್ರಗಳಲ್ಲಿ ಮಹಿಳೆಯರು ಸಾಲಾಗಿ ಬಂದು ತಮ್ಮ ಹಕ್ಕು ಚಲಾವಣೆ ಮಾಡಿದರು. ಅದೇ ರೀತಿ, ಸುಶೀಲಾನಗರ ಗ್ರಾಮದಲ್ಲಿಯೂ ಮಹಿಳೆಯರು ವೋಟ್ ಮಾಡಿದರು.
ಗಮನ ಸೆಳೆದ ಸಖಿ ಮತಗಟ್ಟೆ: ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ತೋರಣಗಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಖಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಮಹಿಳಾ ಮತದಾರರು ಸಖಿ ಮತಗಟ್ಟೆಗೆ ಆಗಮಿಸಿ ವೋಟ್ ಮಾಡಿದರು. ಬಳಿಕ ಅಲ್ಲಿಯೇ ಸ್ಥಾಪಿಸಲಾಗಿದ್ದ ಪಿಂಕ್ ಸೆಲ್ಫಿ ಬೂತ್‌ನಲ್ಲಿ ನಿಂತುಕೊಂಡು ನಿಂತು ಶಾಹಿ ಹಾಕಿದ ಬೆರಳು ತೋರಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.