ಬೆಂಗಳೂರು :ಗಂಧದ ಮರ ಕಳವು ಮಾಡಿದ್ದ ಆರೋಪದಲ್ಲಿ ಆರೋಪಿಯೊಬ್ಬರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 5 ವರ್ಷಗಳ ಶಿಕ್ಷೆಯನ್ನು ಎತ್ತಿಹಿಡಿದಿರುವ ಹೈಕೋರ್ಟ್, 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ವಿಚಾರಣಾ ನ್ಯಾಯಾಲಯ ವಿಧಿಸಿದ್ಧ ದಂಡದ ಪ್ರಮಾಣ ಹೆಚ್ಚಳ ಮಾಡುವಂತೆ ಕೋರಿದ್ದ ರಾಜ್ಯ ಸರ್ಕಾರ ಮತ್ತು ಶಿಕ್ಷೆ ರದ್ದು ಕೋರಿ ಮಂಡ್ಯ ಜಿಲ್ಲೆ ಬಲ್ಲೆನಹಳ್ಳಯ ಆರೋಪಿ ದೇವರಾಜಚಾರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ನ್ಯಾಯಪೀಠ, ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಎತ್ತಿಹಿಡಿದಿದೆ. ಆರೋಪಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ಗಂಧದ ಮರ ಕಳವು ಆರೋಪ ಹಾಗೂ ಅಕ್ರಮವಾಗಿ ಸಂಗ್ರಹಿಸುವ ಸಂಬಂಧ ಮೊದಲ ಬಾರಿ ಆರೋಪ ಸಾಬೀತಾದ ಕೃತ್ಯದಲ್ಲಿ ಭಾಗಿಯಾದವರಿಗೆ 5 ವರ್ಷಗಳಿಗಿಂತಲೂ ಕಡಿಮೆ ಅವಧಿಯ ಶಿಕ್ಷೆ ಇರಬಾರದು ಮತ್ತು 50 ಸಾವಿರಕ್ಕಿಂತಲೂ ಕಡಿಮೆ ದಂಡ ಇರಬಾರದು ಎಂದು ಅರಣ್ಯ ಸಂರಕ್ಷಣಾ ಕಾಯ್ದೆ ಸೆಕ್ಷನ್ 86 ಮತ್ತು 87ರಲ್ಲಿ ತಿಳಿಸಲಾಗಿದೆ. ಆದರೆ, ವಿಚಾರಣಾ ನ್ಯಾಯಾಲಯ ಸೆಕ್ಷನ್ 86ರಂತೆ 5 ವರ್ಷ ಶಿಕ್ಷೆ ವಿಧಿಸಿದ್ದು, 10 ಸಾವಿರ ರೂ. ದಂಡ ವಿಧಿಸಿತ್ತು. ಸೆಕ್ಷನ್ 87ರಲ್ಲಿ ತಿಳಿಸಿರುವಂತೆ 50 ಸಾವಿರಕ್ಕೂ ಹೆಚ್ಚಿನ ಮೊತ್ತದ ದಂಡವನ್ನು ವಿಧಿಸಿಲ್ಲ. ಆದ್ದರಿಂದ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಖಾಯಂಗೊಳಿಸಿದ್ದು, ದಂಡದ ಮೊತ್ತವನ್ನು ಹೆಚ್ಚಳ ಮಾಡುತ್ತಿರುವುದಾಗಿ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಅಲ್ಲದೆ, ಅರಣ್ಯ ಸಂರಕ್ಷಣಾ ಕಾಯ್ದೆ ಸೆಕ್ಷನ್ 86 ಮತ್ತು 87ರ ಅಡಿಯಲ್ಲಿ ಶಿಕ್ಷೆಯನ್ನು ಎತ್ತಿಹಿಡಿದಿದ್ದು, ಎರಡೂ ಆರೋಪಗಳಿಗೆ ತಲಾ 50 ಸಾವಿರದಂತೆ 1 ಲಕ್ಷ ರೂಪಾಯಿಗಳ ದಂಡ ವಿಧಿಸಿ ಆದೇಶ ಹೊರಡಿಸಿದೆ.