ಕೋಲಾರ: ಜಿಲ್ಲೆಯ ಇಬ್ಬರು ಜೆಡಿಎಸ್ ಶಾಸಕರಾದ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಹಾಗೂ ಶ್ರೀನಿವಾಸಪುರ ಶಾಸಕ ವೆಂಕಟಶಿವಾರೆಡ್ಡಿ ಅವರು ಶೀಘ್ರ ಕಾಂಗ್ರೆಸ್ ಸೇರಲಿದ್ದಾರೆ. ಇಬ್ಬರು ಶಾಸಕರು ಸಿಎಂ ಹಾಗೂ ಡಿಸಿಎಂ ಸಮ್ಮುಖದಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದ್ದಾರೆ.
ಜಿಲ್ಲೆಯ ಕಾಂಗ್ರೆಸ್ನ ಹಿರಿಯರ (ಸಚಿವ ಕೆ ಹೆಚ್ ಮುನಿಯಪ್ಪ) ಸಮ್ಮುಖದಲ್ಲಿ ಲೋಕಸಭಾ ಚುನಾವಣೆಗೂ ಮೊದಲೇ ಇಂತಹದ್ದೊಂದು ಬೆಳವಣಿಗೆ ನಡೆಯಲಿದೆ. ಇಬ್ಬರೂ ಶಾಸಕರೂ ಕೂಡಾ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
ಈಗಾಗಲೇ ಸಿಎಂ, ಡಿಸಿಎಂ ಅವರನ್ನ ಶಾಸಕರು ಭೇಟಿ ಮಾಡಿದ್ದು, ಪಕ್ಷಕ್ಕೆ ಸೇರಿಸಿಕೊಳ್ಳುವುದರ ಕುರಿತು ರಮೇಶ್ ಕುಮಾರ್ ಸೇರಿದಂತೆ ಜಿಲ್ಲೆಯ ಶಾಸಕರ ಅಭಿಪ್ರಾಯ ಕೇಳಿದ್ದಾರೆ ಎಂದು ತಿಳಿಸಿದರು. ಅಲ್ಲದೆ ಅವರು ಪಕ್ಷಕ್ಕೆ ಬಂದರೆ ಸ್ವಾಗತಿಸುವುದಾಗಿ ಹೇಳಿದರು.
ವಿಶೇಷವೆಂದರೆ ಒಂದು ವೇಳೆ ಶ್ರೀನಿವಾಸಪುರ ಜೆಡಿಎಸ್ ಶಾಸಕ ವೆಂಕಟಶಿವಾರೆಡ್ಡಿ ಅವರು ರಾಜೀನಾಮೆ ನೀಡಿ ಮತ್ತೆ ಉಪಚುನಾವಣೆ ಎದುರಿಸಲು ಮುಂದಾದರೆ ವೆಂಕಟಶಿವಾರೆಡ್ಡಿ ರಾಜಕೀಯ ಎದುರಾಳಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರೇ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಲಿದ್ದಾರೆ. ಈ ಬೆಳವಣಿಗೆ ಕುರಿತು ರಮೇಶ್ ಕುಮಾರ್ ಅವರೂ ಒಪ್ಪಿಗೆ ನೀಡಿದ್ದಾರೆ ಎಂದು ಶಾಸಕ ಕೊತ್ತೂರು ಮಂಜುನಾಥ್ ದೇವರ ಮೇಲೆ ಆಣೆ ಮಾಡಿ ಹೇಳಿದ್ದಾರೆ. ಸದ್ಯ ಈ ಬೆಳವಣಿಗೆ ಜಿಲ್ಲೆಯಲ್ಲಿ ಹಾಗೂ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಇದರ ಬೆನ್ನಲ್ಲೇ ಜೆಡಿಎಸ್ ಶಾಸಕರಾದ ಸಮೃದ್ದಿ ಮಂಜುನಾಥ್ ಹಾಗೂ ಜೆಡಿಎಸ್ ಶಾಸಕ ವೆಂಕಟಶಿವಾರೆಡ್ಡಿ ಅವರು ತುರ್ತು ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಸಮೃದ್ದಿ ಮಂಜುನಾಥ್ ಅವರು, ಶಾಸಕ ಕೊತ್ತೂರು ಮಂಜುನಾಥ್ ಅವರ ಹೇಳಿಕೆಯನ್ನು ಖಂಡಿಸಿದ್ರು. ಅಲ್ಲದೆ ಇದು ನಮ್ಮನ್ನು ತೇಜೋವಧೆ ಮಾಡುವ ಉದ್ದೇಶ, ಕಾಂಗ್ರೆಸ್ನವರ ತಂತ್ರಗಾರಿಕೆ ಎಂದು ಕಿಡಿಕಾರಿದರು.
ಜೆಡಿಎಸ್ ಪಕ್ಷದಲ್ಲಿ ನೆಮ್ಮದಿಯಾಗಿದ್ದೇನೆ: ಈ ರಾಜಕೀಯ ತಂತ್ರಗಾರಿಕೆ ಬಿಟ್ಟು ಅಭಿವೃದ್ದಿಯತ್ತ ಗಮನ ಹರಿಸುವುದು ಸೂಕ್ತ. ಎಲ್ಲೋ ಒಂದು ಕಡೆ ಡೈವರ್ಟ್ ಮಾಡಲಿಕ್ಕೆ ಇರಬಹುದು ಅನಿಸುತ್ತೆ. ಆ ಕಡೆಯೂ ಇದ್ದಾನೆ, ಈ ಕಡೆಯೂ ಇದ್ದಾನೆ ಎಂದು ಮತದಾರರಿಗೆ ಸಂದೇಶ ಕೊಡುತ್ತಿದ್ದಾರೆ. ಪಕ್ಷ ಬಿಡುತ್ತೇನೆ ಎಂದು ನಾನು ಯಾವತ್ತೂ ಹೇಳಿಲ್ಲ. ಆಹ್ವಾನವನ್ನು ಸ್ವೀಕಾರ ಮಾಡಿದ್ದೇವೆ. ಬಿಜೆಪಿ ಜೊತೆ ನಾವು ಮೈತ್ರಿಯಾಗಿರುವುದೇ ನಮ್ಮನ್ನು ನಾವು ಉಳಿಸಿಕೊಳ್ಳುವುದಕ್ಕೆ ಎಂದರು. ನಾನು ಜೆಡಿಎಸ್ ಪಕ್ಷದಲ್ಲಿ ನೆಮ್ಮದಿಯಾಗಿದ್ದೇನೆ. ಸದೃಢವಾಗಿದ್ದೇನೆ. ಸಮೃದ್ಧವಾಗಿದ್ದೇನೆ. ನಾನು ಯಾವುದೇ ಪಕ್ಷಕ್ಕೆ ಹೋಗುವಂತಹ ತೀರ್ಮಾನವನ್ನು ಇಲ್ಲಿಯವರೆಗೂ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಇದು ಶಾಸಕರಿಗೆ ಶೋಭೆತರುವಂತದ್ದಲ್ಲ. ಅವರು ನನ್ನ ಸ್ನೇಹಿತರು. ಅವರ ಮೇಲೆ ಪ್ರೀತಿ ಇದೆ. ಆದರೆ ಈ ರೀತಿಯ ರಾಜಕಾರಣ ಮಾಡುವುದು ಸರಿಯಲ್ಲ. ಜಿಲ್ಲೆಯ ಅಭಿವೃದ್ದಿ ವಿಚಾರದಲ್ಲಿ ಜೊತೆಗೆ ಕರೆಯಿರಿ ಬರುತ್ತೇವೆ. ಈ ರೀತಿಯ ರಾಜಕಾರಣ ಮಾಡಬೇಡಿ ಎಂದು ಹೇಳಿದ್ರು.
ಇದನ್ನೂ ಓದಿ:ಕೆಲವರು ತಲೆ ಕೆಟ್ಟು ಈ ರೀತಿ ಮಾತನಾಡುತ್ತಾರೆ : ಶಾಮನೂರು ವಿರುದ್ಧ ಕೊತ್ತೂರು ಮಂಜುನಾಥ್ ವಾಗ್ದಾಳಿ