ಚಿಕ್ಕೋಡಿ: ರಷ್ಯಾ ಸೇನೆಯಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ. ಚಿಕ್ಕೋಡಿ ಪಟ್ಟಣದಲ್ಲಿ ಇಂದು ಕೆ.ಎಲ್.ಇ ಸಂಸ್ಥೆಯ ಸಿ.ಬಿ.ಎಸ್.ಇ ಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
"ಈ ವಿಚಾರವಾಗಿ ವಿವಿಧ ರಾಜ್ಯಗಳ ಸಂಸದರೂ ಸಹ ನನಗೆ ಪತ್ರ ಬರೆದಿದ್ದಾರೆ. ದೇಶದ ಬೇರೆ ಬೇರೆ ರಾಜ್ಯಗಳಿಂದ ಯುವಕರಿಗೆ ತಪ್ಪು ಮಾಹಿತಿ ನೀಡಿ ರಷ್ಯಾ ದೇಶಕ್ಕೆ ಕರೆಸಿಕೊಂಡಿದ್ದಾರೆ. ಸುಳ್ಳು ಹೇಳಿ ಅಲ್ಲಿನ ಸೇನೆಗೆ ಸೇರಿಸಿಕೊಂಡಿದ್ದಾರೆ. ಈಗಾಗಲೇ ರಷ್ಯಾ ಸರ್ಕಾರದೊಂದಿಗೆ ಗಂಭೀರವಾಗಿ ಮಾತುಕತೆ ಮಾಡಲಾಗಿದೆ. ರಷ್ಯಾ ರಾಯಭಾರಿಯನ್ನು ಕರೆಸಿ ಮಾತುಕತೆಯಾಗಿದೆ. ಅಲ್ಲಿನ ವಿದೇಶಾಂಗ ಸಚಿವರೊಂದಿಗೂ ಮಾತುಕತೆ ನಡೆಸಿದ್ದೇವೆ" ಎಂದು ಹೇಳಿದರು.
"ಭಾರತೀಯ ನಾಗರಿಕರು ಬೇರೆಯವರ ಸೇನೆಯಲ್ಲಿ ಹೋರಾಡುವುದಿಲ್ಲ. ಇಂತಹ ಘಟನೆ ನಡೆದಿರುವುದು ತಪ್ಪು. ಈ ಬಗ್ಗೆ ನಿಗಾ ಇಡಲಾಗಿದೆ. ಕೆಲವರು ಈಗಾಗಲೇ ವಾಪಸ್ ಆಗಿದ್ದಾರೆ. ಇನ್ನು ಕೆಲವರು ಬರುವ ನಿರೀಕ್ಷೆಯಿದೆ. ಎಲ್ಲರನ್ನೂ ವಾಪಸ್ ಕರೆಸಿಕೊಳ್ಳುತ್ತೇವೆ. 6 ರಾಜ್ಯದ ಜನ ರಷ್ಯಾದಲ್ಲಿದ್ದಾರೆ" ಎಂದು ಮಾಹಿತಿ ನೀಡಿದರು.