ಬೆಂಗಳೂರು:ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನು ಪಡೆದು ಹೊರಗಿರುವ ನಟ ದರ್ಶನ್ ಬಳಿಯಿರುವ ಗನ್ ಅನ್ನ ಆರ್.ಆರ್.ನಗರ ಪೊಲೀಸರು ಸೀಜ್ ಮಾಡಿದ್ದಾರೆ. ಗನ್ ಪರವಾನಗಿ ರದ್ದು ಹಿನ್ನೆಲೆಯಲ್ಲಿ ಪೊಲೀಸರು, ದರ್ಶನ್ ನಿವಾಸಕ್ಕೆ ತೆರಳಿ ಗನ್ ವಾಪಸ್ ಪಡೆದುಕೊಂಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಹಿನ್ನೆಲೆಯಲ್ಲಿ ಪ್ರಕರಣದ ಎರಡನೇ ಆರೋಪಿಯಾಗಿರುವ ದರ್ಶನ್ ಬಳಿಯಿದ್ದ ಪರವಾನಗಿ ಗನ್ ರದ್ದು ಸಂಬಂಧ ನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಉತ್ತರಿಸಿದ ದರ್ಶನ್, ನಾನೊಬ್ಬ ನಟನಾಗಿದ್ದು ತನಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಸಿನಿಮಾ ಚಿತ್ರೀಕರಣ ಮತ್ತು ವೈಯಕ್ತಿಕ ಕಾರ್ಯಕ್ರಮಗಳಿಗೆ ಬೆಂಗಳೂರಿನಿಂದ ಹೊರಗೆ ಸಹ ಪ್ರಯಾಣಿಸುವೆ. ನನ್ನ ಭದ್ರತೆ ಸಲುವಾಗಿ ಬಂದೂಕು ಬಳಕೆ ಅಗತ್ಯವಾಗಿದೆ. ಅಲ್ಲದೇ ಕಾನೂನಾತ್ಮಕವಾಗಿ ಗನ್ ಪಡೆದುಕೊಂಡಿದ್ದು ಯಾವುದೇ ಷರತ್ತು ಉಲ್ಲಂಘಿಸಿಲ್ಲ ಎಂದು ತಿಳಿಸಿದ್ದರು.