ಕರ್ನಾಟಕ

karnataka

ETV Bharat / state

ಆಟೋದಲ್ಲಿ ಪ್ರಯಾಣಿಕನ ಚಿನ್ನಾಭರಣ ಸುಲಿಗೆ: ಹೆಂಡತಿ ಹೆಸರಲ್ಲಿ ಗಿರವಿ ಇಟ್ಟಿದ್ದ ರಿಕ್ಷಾ ಚಾಲಕ ಅಂದರ್​ - BENGALURU CRIME - BENGALURU CRIME

ಯುವಕನೋರ್ವನ ಚಿನ್ನಾಭರಣ ಸುಲಿಗೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಸಲೀಂ
ಆರೋಪಿ ಸಲೀಂ (ETV Bharat)

By ETV Bharat Karnataka Team

Published : May 8, 2024, 1:20 PM IST

ಬೆಂಗಳೂರು:ತಂದೆ ಬೈದಿದ್ದಕ್ಕೆ ಸಿಟ್ಟಾಗಿ ಮನೆ ಬಿಟ್ಟು ರಿಕ್ಷಾ ಏರಿದ್ದ ಯುವಕನ ಬ್ಯಾಗಿನಲ್ಲಿದ್ದ ಚಿನ್ನಾಭರಣ ಸುಲಿಗೆ ಮಾಡಿದ್ದ ಆಟೋ ಚಾಲಕನನ್ನು ಹೆಚ್​ಎಎಲ್ ಠಾಣೆಯ​ ಪೊಲೀಸರು ಬಂಧಿಸಿದ್ದಾರೆ.

ಸುಲಿಗೆಗೊಳಗಾದ ಯುವಕನ ಸೋದರಮಾವ ನೀಡಿದ ದೂರು ಆಧರಿಸಿ ವಿದ್ಯಾರಣ್ಯಪುರದ ಎಂ.ಎಸ್. ಪಾಳ್ಯ ನಿವಾಸಿ ಸಲೀಂ ಎಂಬಾತನನ್ನು ಬಂಧಿಸಿ ಆತನಿಂದ 100 ಗ್ರಾಂ ಚಿನ್ನದ ಸರ ಹಾಗೂ ಉಂಗುರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಸುಲಿಗೆಗೊಳಗಾದ ಕಿಶನ್ ರೆಡ್ಡಿ ವಿದ್ಯಾರ್ಥಿಯಾಗಿದ್ದು ದೊಡ್ಡನೆಕ್ಕುಂದಿಯಲ್ಲಿ ವಾಸವಾಗಿದ್ದ. ಸ್ನೇಹಿತನೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿರುವುದನ್ನು ಗಮನಿಸಿದ್ದ ಆತನ ತಂದೆ ಗೆಳೆಯರೊಂದಿಗೆ ಹೆಚ್ಚು ಸೇರದಂತೆ ಬೈದು ಬುದ್ಧಿ ಹೇಳಿದ್ದರು. ಇದರಿಂದ ಕೋಪಗೊಂಡ ಮಗ ಕಳೆದ ಏಪ್ರಿಲ್ 2 ರಂದು ಮನೆ ಬಿಟ್ಟು ಹೋಗಿದ್ದ.

ರಿಕ್ಷಾ ಮುಖಾಂತರ ಮೆಜೆಸ್ಟಿಕ್​ ತಲುಪಿ ಅಲ್ಲಿಂದ ರೈಲಿನಿಂದ‌ ಒಡಿಶಾದ‌ ಭುವನೇಶ್ವರ ತೆರಳಿ ಅಲ್ಲಿಂದ ಪುರಿ‌ ಜಗನ್ನಾಥ ದೇವಾಲಯಕ್ಕೆ ತಲುಪಿದ್ದ.‌ ಈ ಸಂಬಂಧ ಏ.4ರಂದು ಕಿಶನ್ ಕಾಣೆಯಾಗಿರುವುದಾಗಿ ದೂರು ನೀಡಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮಾಹಿತಿ ಕಲೆ ಹಾಕಿ ಪುರಿ ಜಗನ್ನಾಥ ದೇವಸ್ಥಾನದಿಂದ ಏ.6 ರಂದು ಯುವಕನನ್ನು ಪತ್ತೆ ಹಚ್ಚಿ ನಗರಕ್ಕೆ ಕರೆತಂದು ಪೋಷಕರಿಗೆ ಒಪ್ಪಿಸಿದ್ದರು. ಕೆಲ ದಿನಗಳ ಬಳಿಕ‌ ಯುವಕನ ಕುತ್ತಿಗೆಯಲ್ಲಿ ಚಿನ್ನದ ಸರ ಇಲ್ಲದಿರುವುದನ್ನು ಕಿಶನ್​ನ ಸೋದರಮಾವ ಪ್ರಶ್ನಿಸಿದಾಗ ಸುಲಿಗೆಯಾಗಿರುವ ಬಗ್ಗೆ ಹೇಳಿದ್ದಾನೆ.

ಚಿನ್ನಾಭರಣ ಸುಲಿಗೆ ಮಾಡಿ ಹೆಂಡತಿ ಹೆಸರಿನಲ್ಲಿ ಗಿರವಿ ಇಟ್ಟ ಚಾಲಕ:ಮನೆ ಬಿಟ್ಟು ಆಟೋದಲ್ಲಿ ತೆರಳುವಾಗ ಸರ ಹಾಗೂ ಉಂಗುರ ಬಿಚ್ಚಿ ಬ್ಯಾಗ್​ನಲ್ಲಿ ಇಟ್ಟಿದ್ದನ್ನು ಚಾಲಕ ಸಲೀಂ ಗಮನಿಸಿದ್ದ. ರಮೇಶ್​​ ನಗರದ ಬಳಿ ಮೂತ್ರ ವಿಸರ್ಜನೆಗಾಗಿ ರಿಕ್ಷಾ ನಿಲ್ಲಿಸಿದ್ದ. ಯುವಕ ಸಹ ಮೂತ್ರ ವಿಸರ್ಜನೆಗೆ ಮುಂದಾದಾಗ ಸಮಯ ನೋಡಿ ಚಿನ್ನಾಭರಣವಿದ್ದ ಬ್ಯಾಗ್ ಸಮೇತ ಕಸಿದು ಪರಾರಿಯಾಗಿದ್ದ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ರಿಕ್ಷಾ ನಂಬರ್​ ಪತ್ತೆ ಹಚ್ಚಿ ವಿದ್ಯಾರಣ್ಯಪುರದಲ್ಲಿ ವಾಸವಾಗಿದ್ದ ಸಲೀಂನನ್ನು ಬಂಧಿಸಿದ್ದರು. ಸುಲಿಗೆ ಮಾಡಿದ್ದ 6.5 ಲಕ್ಷ ಮೌಲ್ಯದ 100 ಗ್ರಾಂ ಚಿನ್ನವನ್ನು ವಿದ್ಯಾರಣ್ಯಪುರ ಶಾಖೆಯ ಖಾಸಗಿ ಫೈನಾನ್ಸ್​​ನಲ್ಲಿ ಹೆಂಡತಿ ಹೆಸರಿನಲ್ಲಿ ಗಿರವಿ ಇಟ್ಟಿದ್ದ. ಈ ಮಾಹಿತಿ ಆಧರಿಸಿ ಅಡವಿಟ್ಟ ಚಿನ್ನಾಭರಣ ಬಿಡಿಸಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ದೊಡ್ಡಬಳ್ಳಾಪುರ: ರೆಸ್ಟೋರೆಂಟ್ ಪರವಾನಗಿ ನವೀಕರಿಸಲು ಲಂಚ ಪಡೆಯುತ್ತಿದ್ದ ಪಿಡಿಓ ಲೋಕಾಯುಕ್ತ ಬಲೆಗೆ - LOKAYUKTA POLICE ARRESTS PDO

ABOUT THE AUTHOR

...view details