ಬೆಂಗಳೂರು: ಗೋಲ್ಡ್ ಕಂಪನಿಯೊಂದಕ್ಕೆ ನುಗ್ಗಿದ ಕಳ್ಳರು ತಮ್ಮ ಕೈಚಳಕ ತೋರಿರುವ ಘಟನೆ ಬುಧವಾರ ತಡರಾತ್ರಿ ಎನ್.ಆರ್. ಕಾಲೊನಿಯ ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಇರುವ ಬೆನಕ ಗೋಲ್ಡ್ ಕಂಪನಿಯಲ್ಲಿ ನಡೆದಿದೆ. ರಾತ್ರಿ ಕಬ್ಬಿಣದ ಗೇಟ್ ಬೀಗ ಮುರಿದ ಕಳ್ಳರು 250 ಗ್ರಾಂ ಚಿನ್ನಾಭರಣ ಹಾಗೂ 1.8 ಲಕ್ಷ ನಗದು ಕದ್ದು ಪರಾರಿಯಾಗಿದ್ದಾರೆ.
ಬುಧವಾರ ಎಂದಿನಂತೆ ವಹಿವಾಟು ನಡೆಸಿದ್ದ ಕಂಪನಿ ಸಿಬ್ಬಂದಿ, ಗ್ರಾಹಕರಿಂದ ಪಡೆದ ಚಿನ್ನಾಭರಣ, ಹಣವನ್ನು ಲಾಕರ್ನಲ್ಲಿಟ್ಟು ತೆರಳಿದ್ದರು. ಆದರೆ ರಾತ್ರಿ ಕಚೇರಿಗೆ ನುಗ್ಗಿದ್ದ ಕಳ್ಳರು ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದಾರೆ. ಅಲ್ಲಿಂದ ತೆರಳುವ ವೇಳೆ ಕಂಪನಿಯ ಸಿಸಿ ಕ್ಯಾಮರಾ ಡಿವಿಆರ್ ಅನ್ನು ಒಡೆದು ಪುಡಿ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಬಸವನಗುಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.