ಹುಬ್ಬಳ್ಳಿ:ವಾಣಿಜ್ಯ ನಗರಿಯಲ್ಲಿ ಬೆಚ್ಚಿಬೀಳಿಸುವ ಕಳ್ಳತನ ಪ್ರಕರಣ ನಡೆದಿದೆ.ಉಣಕಲ್ ಕೆರೆಯ ಎದುರಿಗೆ ಇರುವ ಸುತಾರಿಯಾ ಮಹೇಂದ್ರ ಶೋ ರೂಂ ಮಾಲೀಕ ಸಚಿನ್ ಶಾ ಅವರ ವಿಜಯನಗರದ ನಿವಾಸದಲ್ಲಿ ಸೆಕ್ಯೂರಿಟಿ ಗಾರ್ಡ್ ಹಾಗೂ ಮನೆಯವರ ಕೈಕಾಲು ಕಟ್ಟಿ ದರೋಡೆ ಮಾಡಿರುವ ಪ್ರಕರಣ ಇಂದು ನಡೆದಿದೆ. ಶ್ವಾನ ದಳ, ಬೆರಳಚ್ಚು ತಜ್ಞರು, ಡಿಸಿಪಿ ಮಹಾನಿಂಗ ನಂದಗಾವಿ ಸೇರಿದಂತೆ ಇನ್ನುಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಸೆಕ್ಯೂರಿಟಿ ಗಾರ್ಡ್ ವಿರೂಪಾಕ್ಷಯ್ಯ ಹಿರೇಮಠ ಎಂಬುವರನ್ನು ಕಟ್ಟಿ ಹಾಕಿ ದರೋಡೆ ಮಾಡಲಾಗಿದೆ. ಗಾಯಗೊಂಡಿರುವ ಸೆಕ್ಯೂರಿಟಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮರಾಠಿ ಮಾತನಾಡುತ್ತಿದ್ದ ನಾಲ್ಕರಿಂದ ಐದು ಜನರಿದ್ದ ತಂಡ ದರೋಡೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಈ ಕುರಿತಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, "ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆ ನಡೆದಾಗ ಸಚಿನ್ ಎಂಬುವವರು ತಮ್ಮ ಕುಟುಂಬ ಹಾಗೂ ತಂದೆ ವಿಜಯ್ ಕುಮಾರ್ ಮತ್ತು ತಾಯಿ ಜೊತೆ ಮನೆಯಲ್ಲಿದ್ದರು. ಸಚಿನ್ ಅವರು ಮನೆಯ ಮೇಲ್ಗಡೆ ಕೊಠಡಿಯಲ್ಲಿದ್ರು. ಬೆಳಗ್ಗೆ ಏಳು ಗಂಟೆಗೆ ಕೆಳಗಡೆ ಬಂದು ನೋಡಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ನಂತರ ರೂಮ್ನಲ್ಲಿ ನೋಡಿದಾಗ ತಂದೆ ತಾಯಿಯನ್ನು ಕುರ್ಚಿ ಮೇಲೆ ಕಟ್ಟಿ ಹಾಕಿದ್ದು. ವಸ್ತುಗಳೆಲ್ಲ ಚೆಲ್ಲಾಪಿಲ್ಲಿ ಆಗಿದ್ದವು. ತಂದೆ ತಾಯಿ ಜೊತೆ ಕೇಳಿದಾಗ ದರೋಡೆ ಬಗ್ಗೆ ಮಾಹಿತಿ ನೀಡಿದ್ದಾರೆ" ಎಂದು ತಿಳಿಸಿದರು.