ಬೆಂಗಳೂರು:ಶಕ್ತಿ ಯೋಜನೆಯ ಹೊರೆಗೆ ಸಿಲುಕಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆಗಳು ಹಣಕಾಸು ನಿರ್ವಹಣೆಗಾಗಿ ಸಾಲದ ಮೊರೆ ಹೋಗಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
ರಾಜ್ಯದ ನಾಲ್ಕೂ ರಸ್ತೆ ಸಾರಿಗೆ ನಿಗಮಗಳಿಗೆ ಹಣಕಾಸಿನ ಸಂಸ್ಥೆಗಳಿಂದ ಸಾಲ ತೆಗೆದುಕೊಳ್ಳಲು ಸರ್ಕಾರದ ಖಾತ್ರಿ ನೀಡಲು ತೀರ್ಮಾನಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಾಲ್ಕೂ ರಸ್ತೆ ಸಾರಿಗೆ ನಿಗಮಗಳಿಗೆ ಸಾಲ ಎತ್ತುವಳಿ ಮಾಡಲು ಸರ್ಕಾರದ ಗ್ಯಾರಂಟಿ ನೀಡಲು ಅನುಮೋದಿಸಿದೆ. ರಸ್ತೆ ಸಾರಿಗೆ ನಿಗಮಗಳು ಒಟ್ಟು 2,000 ಕೋಟಿ ರೂ. ಸಾಲ ಪಡೆದುಕೊಳ್ಳಲು ಸರ್ಕಾರದ ಒಪ್ಪಿಗೆ ನೀಡಿದೆ.
ಅದರಂತೆ ಕ.ರಾ.ರ.ಸಾ. ನಿಗಮಕ್ಕೆ 623.80 ಕೋಟಿ ರೂ., ಬೆಂ.ಮ.ಸಾ. ಸಂಸ್ಥೆಗೆ 589.20 ಕೋಟಿ ರೂ., ವಾ.ಕ.ರ.ಸಾ. ಸಂಸ್ಥೆಗೆ 646 ಕೋಟಿ ರೂ. ಹಾಗೂ ಕ.ಕ.ರ.ಸಾ. ನಿಗಮಕ್ಕೆ 141 ಕೋಟಿ ರೂ. ಸೇರಿದಂತೆ ಒಟ್ಟು 2,000 ಕೋಟಿ ಸಾಲ ಎತ್ತುವಳಿ ಮೂಲಕ ಇಂಧನ ಬಾಕಿ ಮೊತ್ತ ಮತ್ತು ಭವಿಷ್ಯ ನಿಧಿಗೆ ಅನುದಾನ ಬಳಸಿಕೊಳ್ಳಲು ಸರ್ಕಾರದ ಅನುಮೋದನೆ ನೀಡಿದೆ.
ಈ ಮೊದಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಸಾರಿಗೆ ಸಂಸ್ಥೆಗೆ ಶಕ್ತಿ ಯೋಜನೆಯ ಹೊರೆ ನಿಭಾಯಿಸಲು ಇದೀಗ ಸಾರಿಗೆ ನಿಗಮಗಳು ಮತ್ತಷ್ಟು ಸಾಲದ ಕೂಪಕ್ಕೆ ಬೀಳಲಿವೆ. ಭವಿಷ್ಯ ನಿಧಿ, ನಿವೃತ್ತಿ ನೌಕರರ ಉಪಧನ, ರಜೆ ನಗದೀಕರಣ, ಸಿಬ್ಬಂದಿಗಳ ಬಾಕಿ ವೇತನ, ಇಂಧನ ವೆಚ್ಚ, ಸರಬರಾಜು ಬಾಕಿ, ಅಪಘಾತ ಪರಿಹಾರ ಸೇರಿ ಒಟ್ಟು 6,330 ಕೋಟಿ ಸಾಲ ರಸ್ತೆ ಸಾರಿಗೆ ನಿಗಮಗಳ ಮೇಲಿದೆ. ಇದೀಗ ಹೆಚ್ಚುವರಿಯಾಗಿ 2,000 ಕೋಟಿ ಸಾಲ ಪಡೆದರೆ ಒಟ್ಟು ಸಾಲದ ಪ್ರಮಾಣ 8,330.25 ಕೋಟಿ ರೂ.ಗೆ ಏರಿಕೆಯಾಗಲಿದೆ.