ಮಂಗಳೂರು: ಆಸ್ತಿ ಪಹಣಿಯಲ್ಲಿ ವಾರಸುದಾರರ ಹೆಸರು ಸೇರ್ಪಡೆ ಮಾಡಲು 4 ಲಕ್ಷ ರೂ. ಲಂಚದ ಹಣ ಸ್ವೀಕರಿಸುತ್ತಿರುವಾಗಲೇ ಮುಲ್ಕಿ ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಅರ್ಜಿದಾರರು ತಮ್ಮ ಮೃತಪಟ್ಟ ಅಜ್ಜಿಯ ಹೆಸರಿನಲ್ಲಿದ್ದ ಆಸ್ತಿಯ ಪಹಣಿಯಲ್ಲಿ ವಾರಸುದಾರರ ಹೆಸರನ್ನು ಸೇರ್ಪಡೆ ಮಾಡಲು ಕಳೆದ ವರ್ಷ ಮುಲ್ಕಿ ತಾಲೂಕು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮುಲ್ಕಿ ಕಂದಾಯ ನಿರೀಕ್ಷಕರ ಕಚೇರಿಗೆ ವಿಚಾರಣೆಗಾಗಿ ಕಳುಹಿಸಲಾಗಿತ್ತು. ಈ ಅರ್ಜಿಯನ್ನು ಮುಲ್ಕಿ ಕಂದಾಯ ನಿರೀಕ್ಷಕ ಜಿ. ಎಸ್ ದಿನೇಶ್ ಒಂದು ವರ್ಷಕ್ಕಿಂತ ಅಧಿಕ ಕಾಲ ಯಾವುದೇ ಕ್ರಮ ಕೈಗೊಳ್ಳದೇ ಬಾಕಿ ಇರಿಸಿಕೊಂಡಿದ್ದರು. ಅರ್ಜಿದಾರರು ಡಿಸೆಂಬರ್ 9ರಂದು ಕಂದಾಯ ನಿರೀಕ್ಷಕರ ಕಚೇರಿಗೆ ಹೋಗಿ ಈ ಬಗ್ಗೆ ವಿಚಾರಿಸಿದ್ದಾರು. ಆಗ ಕಂದಾಯ ನಿರೀಕ್ಷಕ ಜಿ. ಎಸ್ ದಿನೇಶ್ ಅವರು ಆಸ್ತಿಗೆ ಸಂಬಂಧಿಸಿದ ಪಹಣಿಯಲ್ಲಿ ವಾರಸುದಾರರ ಹೆಸರು ಸೇರ್ಪಡೆಗೆ 4 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಪಿರ್ಯಾದಿದಾರರು ದೂರು ನೀಡಿದ್ದರು.