ಬೆಂಗಳೂರು:''ರಾಜ್ಯದಲ್ಲಿ ಒಂದು ವೇಳೆ ಕಂದಾಯ ಭೂಮಿಯನ್ನು ತಪ್ಪಾಗಿ ಅರಣ್ಯ ಇಲಾಖೆ ನೋಟಿಫೈ ಮಾಡಿರುವುದು ಜಂಟಿ ಸರ್ವೆ ಅಥವಾ ಡ್ರೋನ್ ಸರ್ವೆಯಿಂದ ಖಚಿತವಾದಲ್ಲಿ ಆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗುವುದು'' ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ''ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಜೊತೆ ಈ ಕುರಿತು ಚರ್ಚೆ ನಡೆಸಲಾಗಿದೆ. ಜಂಟಿ ಸರ್ವೆ ನಂತರ ಕಂದಾಯ ಭೂಮಿ ಮತ್ತು ಅರಣ್ಯ ಭೂಮಿ ಗಡಿಯನ್ನು ನಿಖರವಾಗಿ ಗುರುತಿಸಲಾಗುವುದು. ಗಡಿ ಗುರುತಿಸಿದ ನಂತರ ಅಂತಹ ಜಮೀನಿನಲ್ಲಿ ಒಂದು ವೇಳೆ ಕೃಷಿ ಚಟುವಟಿಕೆ ನಡೆಯುತ್ತಿದ್ದರೆ, ಅರ್ಹ ಹಿಡುವಳಿದಾರರಿಗೆ ಸಾಗುವಳಿ ಚೀಟಿ ನೀಡಲು ಕ್ರಮ ಜರುಗಿಸಲಾಗುತ್ತದೆ. ಫಾರಂ-57 ಅಡಿಯಲ್ಲಿ ಅರ್ಹ ರೈತರು ಅರ್ಜಿ ಸಲ್ಲಿಸಿದ್ದರೆ, ಬಗರ್‌ಹುಕುಂ ಆ್ಯಪ್ ಮೂಲಕ ಭೂ ಮಂಜೂರು ಮಾಡುವುದು ಸರ್ಕಾರದ ಕರ್ತವ್ಯ'' ಎಂದರು.
''ರಾಜ್ಯದಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯ ಗಡಿ ವಿಚಾರದಲ್ಲಿ ದಶಕಗಳಿಂದಲೂ ಸಮಸ್ಯೆಗಳಿವೆ. ಅರಣ್ಯಭೂಮಿಯ ಗಡಿ ಗುರುತಿಸದ ಕಾರಣ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿರುವ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆರ್‌ಟಿಸಿ, ಪೋಡಿ, ಫೌತಿ ಖಾತೆ ಸೇರಿದಂತೆ ಈ ಭಾಗದಲ್ಲಿರುವವರಿಗೆ ಕಂದಾಯ ಇಲಾಖೆ ಸೇವೆಗಳನ್ನು ತಲುಪಿಸುವುದು ನೀಡುವುದು ದುಸ್ಥರವಾಗಿದೆ. ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದೂ ಸಹ ಸವಾಲಿನ ಕೆಲಸವಾಗಿದೆ'' ಎಂದಿದ್ದಾರೆ.
''ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಕಂದಾಯ ಹಾಗೂ ಅರಣ್ಯ ಇಲಾಖೆ ವತಿಯಿಂದ ರಾಜ್ಯಾದ್ಯಂತ ಜಂಟಿ ಸರ್ವೆ ನಡೆಸಿ ಜನ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಳೆದ ಚಳಿಗಾಲದ ಅಧಿವೇಶನದಲ್ಲೇ ಭರವಸೆ ನೀಡಿತ್ತು. ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಮೂಲಕ ಪರಿಭಾವಿತ ಅರಣ್ಯ, ಮೀಸಲು ಅರಣ್ಯದ ಮಾಹಿತಿಯನ್ನು ಸಾರ್ವಜನಿಕಗೊಳಿಸುವ ಹಾಗೂ ನಕ್ಷೆ ಇಲ್ಲದ ಜಮೀನುಗಳಲ್ಲಿ ರೈತರಿಗೆ ಸಾಗುವಳಿ ಚೀಟಿ ನೀಡಲು ಸರ್ಕಾರ ನಿಶ್ಚಯಿಸಿತ್ತು. ಅದರಂತೆ ಅನೇಕ ವರ್ಷಗಳ ನಂತರ ಅರಣ್ಯ ಭೂಮಿಯ ಜಂಟಿ ಸರ್ವೆಗೆ ಫೆಬ್ರವರಿ 16ರಂದೇ ಅಧಿಕೃತವಾಗಿ ಸರ್ಕಾರದ ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯಾದ್ಯಂತ ಸರ್ವೆ ಕೆಲಸವೂ ಭರದಿಂದ ಸಾಗುತ್ತಿದೆ. ಅಧಿಸೂಚನೆಯಲ್ಲಿ ಸೂಚಿಸಿರುವಂತೆ ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ಕಾರ್ಯದಲ್ಲಿ ತೊಡಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ'' ಎಂದು ತಿಳಿಸಿದ್ದಾರೆ.
ಡೀನೋಟಿಫಿಕೇಷನ್ ಮಾಡಲು ಅರಣ್ಯ ಇಲಾಖೆಗೆ ಮನವಿ:''ಕಳೆದ ಎರಡು ತಿಂಗಳುಗಳಿಂದ ಜಂಟಿ ಸರ್ವೆ ಕೆಲಸ ಪ್ರಗತಿಯಲ್ಲಿದೆ. ಈಗಾಗಲೇ ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸರ್ವೆ ಕೆಲಸ ಪ್ರಗತಿಯಲ್ಲಿದೆ. ಸರ್ಕಾರಿ ಭೂ ಮಾಪಕರು (ಸರ್ವೆಯರ್) ಹಾಗೂ ಪರವಾನಗಿ ಹೊಂದಿರುವ ಭೂ ಮಾಪಕರ ಸಹಾಯದಿಂದ ಸರ್ವೆ ಕೆಲಸ ಆರಂಭಿಸಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 28,45,964 ಎಕರೆ ಪರಿಭಾವಿತ ಅರಣ್ಯ ಪ್ರದೇಶವಿದ್ದು, ಈ ಪೈಕಿ 12,70,847 ಎಕರೆ ಭೂಮಿಯನ್ನು ಅಳತೆ ಮಾಡಲಾಗಿದೆ. 11,541 ಎಕರೆ ವಿಸ್ತೀರ್ಣದ ಭೂಮಿ ಅಳತೆಗೆ ಬಾಕಿ ಇದ್ದು ಕ್ರಮ ಜರುಗಿಸಲಾಗಿದೆ. ಈವರೆಗಿನ ಸರ್ವೆ ಪ್ರಕಾರ ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 7910 ಎಕರೆ ಕಂದಾಯ ಜಮೀನು ಇದ್ದು, ಇದನ್ನು ಅರಣ್ಯ ಇಲಾಖೆ ನೋಟಿಫಿಕೇಶನ್ ಮಾಡಿರುವುದು ಪತ್ತೆಯಾಗಿದೆ. ಹೀಗಾಗಿ ಈ ಜಮೀನನ್ನು ಡೀನೋಟಿಫಿಕೇಷನ್ ಮಾಡಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ'' ಎಂದಿದ್ದಾರೆ.