ಬೆಂಗಳೂರು: ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದು ಅರ್ಧ ದಿನ ಕಳೆದರೂ ಅದನ್ನು ಬಹಿರಂಗಪಡಿಸದೇ ತಿರುಚುವ ಪ್ರಯತ್ನ ನಡೆಯುತ್ತಿದೆ. ನಮಗೆ ಬಂದಿರುವ ಮಾಹಿತಿ ಪ್ರಕಾರ ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿರುವುದು ನಿಜ ಎಂದಿದ್ದು, ಕೂಡಲೇ ವರದಿ ಬಹಿರಂಗಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ ಆಗ್ರಹಿಸಿದ್ದಾರೆ.
ಆರ್.ಟಿ.ನಗರ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕೇವಲ ಘೋಷಣೆ ಕೂಗಿರುವುದಲ್ಲ. ಬಳ್ಳಾರಿಯಲ್ಲಿ ಬೇರೆ ಬೇರೆ ವಿಚಾರವಾಗಿಯೂ ಕೂಡ ಪ್ರಕರಣಗಳಿವೆ. ಯಾರೆಲ್ಲಾ ಕೂಗಿದ್ದಾರೆ, ಅವರ ವಿರುದ್ಧ ಕ್ರಮ ಆಗದಿದ್ದರೆ ದೇಶದ್ರೋಹಿಗಳಿಗೆ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಹಾಗಾಗಿ ಕೂಡಲೇ ವರದಿ ಬಹಿರಂಗಪಡಿಸಿ. ಘೋಷಣೆ ಕೂಗಿದ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ಪಕ್ಷಕ್ಕೆ ನಮ್ಮದು ಜಾತ್ಯತೀತ ಪಕ್ಷ ಅಂತ ಜಾತಿ ಮೇಲೆ ಎಲ್ಲಿಲ್ಲದ ಪ್ರೀತಿ ಬರುತ್ತದೆ. ನಾಲ್ಕು ವರ್ಷ ಎಲ್ಲರನ್ನೂ ಈ ಸರ್ಕಾರ ದೂರ ಇಟ್ಟಿರುತ್ತದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಜಾತಿ ಸಮಾವೇಶ ಮಾಡುವುದು, ಜಾತಿ ಜಾತಿಗಳ ಬಗ್ಗೆ ಮಾತಾಡುವ ಕೆಲಸ ಮಾಡುತ್ತಾರೆ. 2015ರಲ್ಲಿ ಸಿದ್ದರಾಮಯ್ಯ ಎಲ್ಲಾ ಜಾತಿಗಳ ಅಧ್ಯಯನ ಮಾಡಿ ಅಂತ ಕಾಂತರಾಜ ಸಮಿತಿ ಮಾಡಿದರು. ಜಾತಿ ಜನಗಣತಿ ಮಾಡುವುದು ಕೇಂದ್ರದ ಅಧಿಕಾರ ಅಂತ ಸುಪ್ರೀಂ ಕೋರ್ಟ್ನಲ್ಲಿ 6 ಪ್ರಕರಣಗಳಿವೆ. ಸುಪ್ರೀಂ ಕೋರ್ಟ್ ಕೇಸ್ ನಿರ್ಣಯ ಆಗಬೇಕು. ಅದನ್ನು ತಪ್ಪಿಸಲು ಜಾತಿ ಗಣತಿ ಅನ್ನೋದು ಬಿಟ್ಟು, ಶೈಕ್ಷಣಿಕ ಜನಗಣತಿ ಅಂತ ಮಾಡಿದರು. ಇದರ ಒಳ ಉದ್ದೇಶ ಒಂದು, ಹೊರ ಉದ್ದೇಶ ಒಂದು. ಸಿದ್ದರಾಮಯ್ಯ ಸಿಎಂ ಆಗಿದ್ದರೂ ವರದಿ ಸ್ವೀಕಾರ ಮಾಡಲಿಲ್ಲ. ಮುಂದೆ ವರದಿ ಬಗ್ಗೆ ಸಾಕಷ್ಟು ಗೊಂದಲ ಇತ್ತು. ಈಗಲೂ ಕೂಡ ಬಹಳ ವಿರೋಧ ಇದೆ. ಸಮೀಕ್ಷೆ ಆಗಿಲ್ಲ ಅನ್ನೋ ಆರೋಪ ಇದೆ. ಈಗ ಕೊಟ್ಟಿರುವ ವರದಿ ಚೌ ಚೌ ವರದಿ. ದತ್ತಾಂಶ ಕಾಂತರಾಜು ಅವರದ್ದು, ವರದಿ ನಂದು ಅಂತ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಆದೇಶ ಇರುವುದು ಜಯಪ್ರಕಾಶ್ ಹೆಗ್ಡೆದು. ವರದಿ ಸ್ವೀಕಾರ ಕೇವಲ ರಾಜಕೀಯದ್ದು ಮಾತ್ರ ಎಂದು ಟೀಕಿಸಿದರು.