ಬೆಳಗಾವಿ:ಘಟಪ್ರಭಾ ನದಿ ಉಕ್ಕಿ ಹರಿದು ಮನೆಗಳು ಜಲಾವೃತವಾಗಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿರುವ ಗೋಕಾಕ್ ನಗರದ ಮಹಿಳೆಯರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತಮ್ಮ ಮನೆಯನ್ನು ಪ್ರವಾಹ ಕಸಿದುಕೊಂಡರೆ, ಮತ್ತೊಂದೆಡೆ ಸಂಘದ ಸಾಲ ಹೊರೆಯಾಗುತ್ತಿದೆ. ಇವರು ಊಟ, ವಾಸ್ತವ್ಯಕ್ಕೆ ಕಾಳಜಿ ಕೇಂದ್ರವನ್ನು ಆಶ್ರಯಿಸಿದ್ದು, ಇಲ್ಲಿಗೂ ಸಂಘದ ಪ್ರತಿನಿಧಿಗಳು ಆಗಮಿಸಿ ವಾರದ ಕಂತು ತುಂಬುವಂತೆ ದುಂಬಾಲು ಬಿದ್ದಿದ್ದಾರೆ. ಈ ಕುರಿತು ಇಲ್ಲಿನ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.
'ಈಟಿವಿ ಭಾರತ'ದ ಪ್ರತಿನಿಧಿ ಜೊತೆಗೆ ಮಾತನಾಡಿದ ತಂಗೆವ್ವಾ ಎಂಬ ಮಹಿಳೆ, "ಶಾಲೆಯಲ್ಲಿದ್ದರೂ ಸಂಘದವರು ಮತ್ತು ಸಾಲಗಾರರು ನಮ್ಮನ್ನು ಬಿಡುತ್ತಿಲ್ಲ. ಉದ್ಯೋಗ ಮಾಡಬೇಕೆಂದು ಬೇರೆ ಬೇರೆ ಸಂಘಗಳಲ್ಲಿ 2 ಲಕ್ಷ ರೂ. ಸಾಲ ಪಡೆದಿದ್ದೇವೆ. ಪ್ರತೀ ವಾರ 6 ಸಾವಿರ ರೂ ತುಂಬಬೇಕು. ಈಗ ನೋಡಿದರೆ ವ್ಯಾಪಾರವೂ ಇಲ್ಲ. ಹೇಗೆ ಸಾಲ ತುಂಬಬೇಕೋ ತಿಳಿಯುತ್ತಿಲ್ಲ. ಆರು ತಿಂಗಳು ದುಡಿದು ಹೇಗೋ ಸಾಲ ತೀರಿಸಬೇಕೆನ್ನುವಷ್ಟರಲ್ಲಿ ನೆರೆ ಬರುತ್ತದೆ. ಪ್ರತೀ ವರ್ಷ ಇದು ನಮಗೆ ತಪ್ಪಿದ್ದಲ್ಲ. ಮುಂದೇನು ಮಾಡಬೇಕೆಂದು ತಿಳಿಯುತ್ತಿಲ್ಲ" ಎಂದರು.
ಯಲ್ಲವ್ವ ಮುರಕಿಭಾವಿ ಎಂಬವರು ಮಾತನಾಡಿ, "ನಾನು ತಲೆ ಮೇಲೆ ಬುಟ್ಟಿ ಹೊತ್ತುಕೊಂಡು ಕಾಯಿಪಲ್ಲೆ ವ್ಯಾಪಾರ ಮಾಡುತ್ತೇನೆ. ಎರಡು ಸಂಘಗಳಲ್ಲಿ ಸಾಲ ಪಡೆದಿದ್ದೇನೆ. ತಿಂಗಳಿಗೆ ಒಂದು ಸಂಘಕ್ಕೆ 1,630 ರೂ ಮತ್ತು ಇನ್ನೊಂದು ಸಂಘಕ್ಕೆ ವಾರಕ್ಕೆ 1,220 ರೂ. ಕಂತು ಕಟ್ಟಬೇಕು. ನೀವು ಏನು ಮಾಡುತ್ತೀರೋ ನಮಗೆ ಗೊತ್ತಿಲ್ಲ, ಸಾಲ ತುಂಬಲೇಬೇಕು ಅಂತಾ ಸಂಘದವರು ಹೇಳಿದ್ದಾರೆ. ಶನಿವಾರವರೆಗೆ ನಮಗೆ ಟೈಂ ಕೊಟ್ಟಿದ್ದಾರೆ. ಆದರೆ, ಇಂಥ ಪರಿಸ್ಥಿತಿಯಲ್ಲಿ ಹೇಗೆ ತುಂಬಬೇಕು? ನಮಗೆ ಆಗುವುದಿಲ್ಲ" ಎಂದು ತಿಳಿಸಿರುವುದಾಗಿ ಬೇಸರ ಹೊರಹಾಕಿದರು.